ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಹುಟ್ಟಿದಾಗ, ಶಿರಸಿಯಲ್ಲಿ ಬೆಳೆಯುವಾಗ, ಓದುವಾಗ, ಬೇಡರವೇಷ ಹಾಕಿ ಗಲ್ಲಿ ಗಲ್ಲಿ ಸುತ್ತುವಾಗ, ಯಕ್ಷಗಾನ ನಾಟಕ ನೋಡುತ್ತ, ಸೈಕಲ್ ತುಳಿಯುತ್ತ, ಬೈಕ್ ಓಡಿಸುತ್ತ ಊರು ಊರು ತಿರುಗುವಾಗ, ಓದು ಮುಗಿಸಿ ಜರ್ಮನ್ ಮೂಲದ 'ಗ್ಯಾನನ್ ಡಂಕರ್ಲಿ' ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಸೇರಿಕೊಂಡಾಗ, ಮಹಾರಾಷ್ಟ್ರದ ಪಾತಾಳಗಂಗಾದಲ್ಲಿರುವ ರಿಲಾಯನ್ಸ್ ಇಂಡಸ್ಟ್ರೀಸ್, ತಲೋಜಾದ ಫೋಟ್ ಗ್ಲಾಸ್, ಗೋವಾದ ಪೋಂಡಾದಲ್ಲಿರುವ ಮ್ಯಾರಿಕೊ ಇಂಡಸ್ಟ್ರೀಸ್ ಮತ್ತು ವೇರ್ಣಾದಲ್ಲಿರುವ ಹೇಸ್ಟ್ ಫಾರ್ಮಾಕ್ಯೂಟಿಕಲ್ಸ್ ಕಟ್ಟುವಾಗ, ಕೊಲ್ಲಿ ರಾಷ್ಟ್ರಗಳಲ್ಲಿ ಒಂದಾದ ಸೌದಿ ಅರೇಬಿಯಾಕ್ಕೆ ಬಂದಾಗ, ಪ್ರತಿಷ್ಠಿತ ಸೌದಿ ಅರಾಮ್ಮೋ ಸಂಸ್ಥೆಯಲ್ಲಿ ಗುತ್ತಿಗೆದಾರ ಸಂಸ್ಥೆಯಲ್ಲಿ ಹದಿನೇಳು ವರ್ಷ ಕೆಲಸ ಮಾಡುವಾಗ, ಕಾರ್ಯ ನಿಮಿತ್ತ ಮರುಭೂಮಿಯಲ್ಲಿ ಸುತ್ತುವಾಗ, ನಂತರ ಬಹ್ಮನ್ ದೇಶಕ್ಕೆ ಬಂದು ಸ್ವಂತ ಉದ್ದಿಮೆ ಆರಂಭಿಸುವಾಗ, ಸೌದಿ ಅರೇಬಿಯಾದ ಎಜಿಎ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬನಾದಾಗ,
'ಹಾಡು ಹಕ್ಕಿ ಹಾಡು', 'ವೆರಿಗುಡ್ 10/10' ಮಕ್ಕಳ ಚಿತ್ರದ ಸಹ ನಿರ್ಮಾಪಕನಾದಾಗ, ಬಹ್ಮನ್ನ 'ಸಾರ್ಥ ಫೌಂಡೇಶನ್', ಶಿರಸಿಯ 'ಅಧ್ಯಾಯ ಟ್ರಸ್ಟ್', 'ವಿಕ್ಕಿ ಬುಕ್ಸ್' ಪ್ರಕಾಶನದ ನಿರ್ದೇಶಕನಾದಾಗ, ಕುಮಟಾದ 'ಸಾರ್ಥ ಪ್ರತಿಷ್ಠಾನ'ದ ಉಪಾಧ್ಯಕ್ಷನಾದಾಗ, ಕನ್ನಡ ಸಂಘ ಬಹೈನ್ನಲ್ಲಿ ಒಂಬತ್ತು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವಾಗ, 'ಇಂಟರ್ ನ್ಯಾಷನಲ್ ಪ್ರೋಬಾಲ್ ಫೆಡರೇಷನ್'ನ ಗಲ್ಫ್ ರಾಷ್ಟ್ರಗಳ ಸಂಚಾಲಕನಾದಾಗ, ಇಷ್ಟದ ಆಟವಾದ ಕ್ರಿಕೆಟ್, ಬ್ಯಾಡ್ಮಿಂಟನ್, ವಾಲಿಬಾಲ್ ಆಡುವಾಗ, ನೃತ್ಯ ನೋಡುವಾಗ, ಸಂಗೀತ ಆಲಿಸುವಾಗ,
ವಿಶ್ವವಾಣಿ ದಿನಪತ್ರಿಕೆಯಲ್ಲಿ ಕಳೆದ ಐದು ವರ್ಷದಿಂದ ಪ್ರತಿ ಸೋಮವಾರ ಅಂಕಣ ಬರೆಯುವಾಗ, ಮೊದಲ ಕೃತಿ 'ಆಸ್ತಿಕತೆ' ಇಂಗ್ಲೀಷ್ ನಿಂದ ಕನ್ನಡಕ್ಕೆ ಭಾವಾನುವಾದ ಮಾಡುವಾಗ, ನಂತರದ ಕೃತಿಗಳಾದ 'ವಿಶ್ವತೋಮುಖ', 'ವಿದೇಶವಾಸಿ', 'ಪರದೇಶವಾಸಿ', 'ಹೊರದೇಶವಾಸಿ', 'ದೂರದೇಶವಾಸಿ', 'ಉಭಯದೇಶವಾಸಿ' ಕೃತಿಗಳ ಬಿಡುಗಡೆಯಾಗುವಾಗ, 'ಬಹುದೇಶವಾಸಿ' ಎಂಟನೇ ಕೃತಿಯಾಗಿ ಲೋಕಾರ್ಪಣೆಗೊಳ್ಳುತ್ತದೆ ಎಂದು ಎಣಿಸಿರಲಿಲ್ಲ.
ಸಂಪಾದನೆ ಸೂಚಿಸಲು ಅಥವಾ ಈ ಪುಟವನ್ನು ವರದಿ ಮಾಡಲು
ಲಾಗಿನ್ ಆಗಿ.