ಕಾರಿನ ಡಿಕ್ಕಿಯೊಳಗೆ ಮೃತನ ಬಟ್ಟೆ ಬರೆಗಳನ್ನು ಇಟ್ಟು ಬಂದು ಡ್ರೈವರನ ಪಕ್ಕದ ಸೀಟಿನಲ್ಲಿ ಆಂಜನೇಯ ಆಸೀನನಾದ. ಹಿಂದಿನ ಸೀಟಿನಲ್ಲಿ ಸುಸ್ರತ್ ಅಲಿ ಮತ್ತು ಮಂಜಪ್ಪ ಗೌಡರು ಆಸೀನರಾದರು. ಕಾರು ತನ್ನ ಪಯಣ ಮುಂದುವರಿಸಿತು. ಅಕ್ಷಯ ತೃತಿಯ ಅಮವಾಸ್ಯೆಯ ನಂತರದ ನವಮಿಯ ಚಂದ್ರ ಪೂರ್ವ ದಿಗಂತೆದಲ್ಲಿ ಮೇಲೇರುತ್ತಿದ್ದ. ಕಪ್ಪು ಕವಿದಿದ್ದ ಕಾನಿಗೆ ಬೆಳಕು ನೀಡಿದ್ದ. ಚಂದ್ರನ ತಣ್ಣನೆಯ ಹಾಲು ಬೆಳದಿಂಗಳು ಕಾಡನ್ನು ವ್ಯಾಪಿಸ ತೊಡಗಿತ್ತು. ಆ ಮಂದ ಬೆಳದಿಂಗಳ ಬೆಳಕಿನಲ್ಲಿ ಸುಂದರ ಸಸ್ಯಕಾಶಿ ಜುಳು ಜುಳು ನಿನಾದ ಮಾಡುತ್ತ ಹರಿಯುತ್ತಿದ್ದ ಸಣ್ಣ ಸಣ್ಣ ಝರಿ ತೊರೆಗಳು ಜೀವದಳೆದು ನಿಂತಿದ್ದವು. ವೇಗವಾಗಿ ಚಲಿಸುತ್ತಿದ್ದ ಕಾರು ಪ್ರಕೃತಿ ತನ್ನೆಲ್ಲ ವೈಭವ ತೋರುತ್ತ ಕಣ್ಮುಂದೆ ಚಲಿಸಿ ಕಣ್ಮರೆಯಾಗುತ್ತಿತ್ತು. ಪಯಣದುದ್ದಕ್ಕೂ ಪ್ರಕೃತಿಯ ಸೌಂದರ್ಯದ ದರ್ಶನದ ರಸದೌತಣ. ಆಂಜನೆಯ ವಸಂತದಲ್ಲಿ ಅರಳಿ ನಿಂತ ಭೂರಮೆಯ ಸೌಂದರ್ಯದಲ್ಲಿ ಲೀನವಾಗಿ ಅದರ ಆಸ್ವಾದನೆಗೆ ತೊಡಗಿದ್ದ. ತಾನಿಂದು ಬರದೆ ಹೋಗಿದ್ದರೆ ಎಂತಹ ಸೌಂದರ್ಯಾನುಭೂತಿ ಯಿಂದ ವಂಚಿತನಾಗುತ್ತಿದ್ದೆ ಎಂದುಕೊಂಡ. ಆ ರಸಮಯ ಗಳಿಗೆಯಲ್ಲಿ ಒಂದು ಕ್ಷಣ ಪರಸಪ್ಪನ ಮುಖ ಆತನ ಕಣ್ಮುಂದೆ ತೇಲಿ ಬಂತು. ಉನ್ನತ ವಿದ್ಯಾಭ್ಯಾಸ ಮಾಡಿದವರು ಸೂಕ್ಷ್ಮ ಮನದವರು ಮತ್ತು ಜೀವನಗ್ರಾಹಿ ಗಳಾಗಿರುತ್ತಾರೆ ಎನ್ನುತ್ತಾರೆ, ಆದರೆ ಈತ ಹೀಗೇಕೆ ? ಬರಿ ಲೌಕಿಕ ಲಾಭ ನಷ್ಟಗಳ ಲೆಖ್ಖಾಚಾರದಲ್ಲಿ ಮುಳುಗಿ ದಟ್ಟ ಜೀವನಾನುಭವ ಗಳಿಂದ ವಂಚಿತ ನಾಗುತ್ತಿದ್ದಾನೆ ಎನಿಸಿತು. ಇದನ್ನೆಲ್ಲ ಹೇಳ ಹೋದರೆ ವ್ಯಂಗ್ಯವಾಗಿ ನಕ್ಕು ಲೇವಡಿ ಮಾಡಿ ಬಿಡುತ್ತಾನೆ. ಇಂದು ಈ ಪ್ರಕರಣಕ್ಕೆ ಸಮ್ಮಂಧ ಪಟ್ಟಂತೆ ಬರಲು ತಪ್ಪಿಸಿ ಕೊಂಡ ಬಗ್ಗೆ ಹೆಮ್ಮೆಯಿಂದ ಮತ್ತು ತನ್ನ ಪ್ರಚಂಡ ಬುದ್ಧಿಗೆ ತಾನೇ ಬೀಗುತ್ತಿರಬಹುದು, ಆದರೆ ಇಂದು ಜರುಗಿದ ಘಟನೆ, ಪಯಣ ಎಲ್ಲವುಗಳನ್ನು ಅವಲೋಕಿಸಿದರೆ ನಾನು ಒಂದು ವೇಳೆ ಈ ದಿನ ಇಲ್ಲಿಗೆ ಬರುವ ಅವಕಾಶ ದಿಂದ ತಪ್ಪಿಸಿ ಕೊಂಡಿದ್ದರೆ ಎಂಥ ಅಪರೂಪದ ಜೀವನಾನುಭವದಿಂದ ವಂಚಿತ ನಾಗುತ್ತಿದ್ದೆ ಎಂದು ಅಂತರ್ಮುಖಿಯಾಗಿ ಚಿಂತಿಸುತ್ತ ಪ್ರಕೃತಿಯ ಆಸ್ವಾದನೆಗೆ ತೊಡಗಿದ್ದ. ಇದ್ದಕ್ಕಿದ್ದಂತೆ ರಫಿಕ್ ಕಾರು ನಿಲ್ಲಿಸಿದ.

     ಅರೆ ಮಬ್ಬು ಅರೆ ಎಚ್ಚರಾವಸ್ಥೆಯಲ್ಲಿದ್ದ ಮಂಜಪ್ಪ ಗೌಡರು ' ರಫಿಕ್ ಮತ್ತೇನೋ ನಿನ್ನ ಗೋಳು, ಈ ಸಲ ಹುಲಿ ಅಡ್ಡ ಬಂತೇನೋ ' ಎಂದು ಅಸಹನೆಯಿಂದ ಛೇಡಿಸಿದರು.

     ' ಹುಲಿ ಅಲ್ಲ ಸಾರ್, ಅದನ್ನು ಒಂದೇ ಏಟಿಗೆ ಮುಗಿಸಬಲ್ಲ ಕಾಳಿಂಗರಾಜ ' ಎಂದ ರಫಿಕ್.

     ಕಾರಿನ ಕಿಟಿಕಿ ಯಿಂದ ಹೊರಗಿಣುಕಿ ನೋಡಿದ ಮಂಜಪ್ಪ ಗೌಡರು ' ಏನೋ ಇದು ! ಹೆಬ್ಬಾವಿನ ಹಾಗೆ ರಸ್ತೆಯ ಆ ತುದಿಯಿಂದ ಈ ತುದಿಗೆ ಉದ್ದಗೆ ಮಲಗಿದೆ, ಇದೇನು ನಾಗರ ಹಾವೋ, ಕೇರೆ ಹಾವೋ ಒಂದೂ ತಿಳಿಯುತ್ತಿಲ್ಲ ' ಎಂದು ಪ್ರತಿಕ್ರಿಯಿಸಿದರು.

     ' ಸಾರ ನೀವು ಬಯಲು ಸೀಮೆಯವರು ನಿಮಗೆ ನಾಗರಹಾವು ಮತ್ತು ಕೇರೆ ಹಾವುಗಳಷ್ಟೆ ಗೊತ್ತು, ಇದು ಅವೆರಡನ್ನೂ ನುಂಗಿ ನೊಣೆಯುವ ಕಾಳಿಂಗ ಸರ್ಪ ಸಾರ್, ಜಗತ್ತಿನ ಎರಡನೆ ವಿಷಜಂತು ಇದು ಮೊದಲನೆ ಯದು ಆಫ್ರಿಕಾದ ಕಾಡಿನ ಕಾಳಿಂಗ ಸರ್ಪ ' ಎಂದು ರಫಿಕ್ ಉತ್ತರಿಸಿದ.

     ' ಭಾಳ ತಿಳಕೊಂಡಿ ಬಿಡಪಾ ನೀನು, ಈ ಕಾರು ಡ್ರೈವಿಂಗ್ ಕೆಲಸ ಬಿಟ್ಟು ಹಾವಾಡಿಸಿಕೊಂಡು ಇದ್ದರನ ಎಷ್ಟೋ ಚೆನ್ನಾಗಿರತಿತ್ತು, ಅದೆಲ್ಲ ವಿವರಣಾ ಕೊಡೋದು ಬಿಡು ಈಗ ಇಲ್ಲಿಂದ ಆಚೆಗೆ ದಾಟಿ ಹೋಗೋದು ಹ್ಯಾಂಗ ? ಅದನ್ನ ತಿಳಸು ' ಎಂದರು ಮಂಜಪ್ಪ ಗೌಡರು.

     ' ಅದು ದಾರಿ ಬಟ್ಟಕೊಟ್ಟ ಮ್ಯಾಲೇನ ನಾವು ಆ ಕಡಿಗೆ ಹೋಗೋಕೆ ಸಾಧ್ಯ ' ಎಂದ ರಫಿಕ್.

     ' ಹೌದಪಾ ಶ್ಯಾಣ್ಯಾ ಅದು ದಾರಿ ಬಿಟ್ಟು ಕೊಡೋದು ಯಾವಾಗ ' ಎಂದರು ಮಂಜಪ್ಪ ಗೌಡರು.

     ' ಅದರ ಮನಸು ತಿಳದಾಗ ' ಎಂದು ರೇಗಿಸುವ ಧಾಟಿಯಲ್ಲಿ ರಫಿಕ್ ಉತ್ತರಿಸಿದ.

     ' ಅದು ಮುಂದ ಹೋಗ್ತಾನೆ ಇಲ್ಲಲ್ಲೋ, ಎಷ್ಟೊತ್ತನಕ ಅದರ ಮರ್ಜಿ ಕಾಯಕೋತ ಕೂಡೋದು ? ' ಎಂದರು ಮಂಜಪ್ಪ ಗೌಡ.

     ' ಇದು ಅದರ ಸಾಮ್ರಾಜ್ಯ ಸಾರ್, ಅದರ ಇಷ್ಟದ್ಹಾಂಗ ನಾವು ನಡಿಬೇಕು, ನಮ್ಮನಿಷ್ಟದ್ಹಾಂಗ ಅಲ್ಲ ' ಎಂದ ರಫಿಕ್.

     ' ರಸ್ತೆ ದಾಟಿ ಮುಂದ ಹೋಗೋ ದಾರಿ ನೋಡೋ ಅಂದ್ರ ಸಾಮ್ರಾಜ್ಯ ಅದು ಇದು ಅಂತ ಕಥೆ ಹೊಡಿತಾನ, ಯಾವ ಸಾಮ್ರಾಜ್ಯ , ಯಾರ ಸಾಮ್ರಾಜ್ಯ , ಎಲ್ಲಿ ಸಾಮ್ರಾಜ್ಯ ? ಎಲ್ಲ ಸಾಮ್ರಾಜ್ಯಾನೂ ಮಣ್ಣ ಗೂಡಿ ಹೇಳ ಹೆಸರಿಲ್ಲದ್ಹಾಂಗ ಹೋದವು, ರಫಿಕ್ ನೀನು ಮತ್ತ ನಮ್ಮ ಆಂಜನೇಯ ಸೇರಿ ಅದರ ಬಾಲ ಎತ್ತಿ ಅತ್ಲಾಗ ಇಡ್ರೋ ' ಎಂದರು ಮಂಜಪ್ಪ ಗೌಡ.

     ' ಸಾರ್ ನಮ್ಮನಿ ಕುಲದೇವ್ರು ಸುಬ್ರಹ್ಮಣ್ಯ ನಾನು ಅದಕ ತೊಂದರೆ ಮಾಡ್ಲಿಕ್ಕೆ ಹೋಗೋದಿಲ್ಲ, ಮೇಲಾಗಿ ನನಗ ಹಾವು ಅಂದ್ರ ಭಯ ಸಾರ್ ' ಎಂದ ಆಂಜನೇಯ.

     ' ನಾನು ಅದಕ ತೊಂದರೆ ಕೊಡು ಅಂತ ಎಲ್ಲಿ ಹೇಳ್ದೆ ? ಬರೆ ಬಾಲ ಎತ್ತಿ ಅತ್ಲಾಗ ಇಡ್ಲಿಕ್ಕೆ ಹೇಳಿದೆ ' ಎಂದರು ಮಂಜಪ್ಪ ಗೌಡ.

     ಆ ಕಾಳಿಂಗ ಸರ್ಪ ಮೆಲ್ಲ ಮೆಲ್ಲನೆ ತೆವಳುತ್ತ ರಸ್ತೆ ದಾಟಿ ಕಾಡಿನಲ್ಲಿ ಕಣ್ಮರೆಯಾಯಿತು. ರಫಿಕ್ ಕಾರ್ ಸ್ಟಾರ್ಟ ಮಾಡಿ ಮುನ್ನಡೆದ. ಎಲ್ಲರೂ ನಿರ್ಗುಂಡಿ ತಲುಪಿದಾಗ ಬೆಳಗಿನ ಜಾವದ ಐದು ಗಂಟೆಯಾಗಿತ್ತು. ಮಂಜಪ್ಪ ಗೌಡರು ಮತ್ತು ನುಸ್ರತ್ ಅಲಿ ತಮ್ಮ ತಮ್ಮ ಮನೆಗಳ ಹತ್ತಿರ ಇಳಿದರು.

     ' ನಿಮ್ಮನ್ನು ನಿಮ್ಮ ಮನೆಯ ಹತ್ತಿರ ಬಿಡಲೆ ? ' ಎಂದು ರಫಿಕ್ ಆಂಜನೇಯನನ್ನು ಕೇಳಿದ.

     ' ಬೇಡ ರಫಿಕ್ ಸಾನು ಮೃತನ ಬಟ್ಟೆ ಬರೆ ವಸ್ತುಗಳನ್ನು ಠಾಣೆಯಲ್ಲಿಟ್ಟು ಬರುವೆ ' ಎಂದ ಆಂಜನೇಯ. ರಫಿಕ್ ಆತನನ್ನು ಠಾಣೆಯ ಮುಂದೆ ಇಳಿಸಿ ತನ್ನ ಮನೆಗೆ ನಡೆದ.


                                                                *

     ಠಾಣೆಯ ಮುಂದೆ ಇಳಿದ ಆಂಜನೇಯ ಮೃತನ ಬಟ್ಟೆಬರೆ ಮತ್ತು ವಸ್ತುಗಳ ಸಮೇತ ಒಳಬಂದ. ರಾತ್ರಿ ಠಾಣಾ ಪ್ರಭಾರದ ಅಧಿಕಾರಿ ಗಂಗಾಧರಯ್ಯ ನವರಿಗೆ ವಂದಿಸಿದ.

     ' ಈಗ ಬಂದ್ರೇನೋ, ನೇಣು ಹಾಕ್ಕೊಂಡವ ಯಾರು ಏನು ಅನ್ನೋದು ಪತ್ತೆಯಾತನು, ನೇಣು ಹಾಕ್ಕೊಂಡು ಭಾಳ ದಿವಸ ಆಗಿತ್ತೇನೋ ? ' ಎಂದು ಗಂಗಾಧರಯ್ಯ ಪ್ರಶ್ನಿಸಿದರು..

     ' ಇಲ್ಲ ಸಾರ್ ಆತ ಯಾರು ಅನ್ನೊದು ಗೊತ್ತಾಗಲಿಲ್ಲ, ಅವ ಬೇರೆ ಎಲ್ಲಿಂದನೋ ಇಲ್ಲಿಗೆ ಬಂದು ನೇಣು ಹಾಕ್ಕೊಂಡಾನ, ನೇಣು ಹಾಕ್ಕೊಂಡು ಭಾಳ ದಿವಸಾನ ಆಗ್ಯಾವ ಸಾರ್. ಹೆಣದ ಮೈಮ್ಯಾಲಿನ ಮಾಂಸದ ಭಾಗ ತೆಳಗ ಉದುರಿ ಬಿದ್ದು ಹುಳ ಬುಚಗುಡಲಿಕ್ಕೆ ಹತ್ತಿದ್ವು, ಇಂಥ ಸ್ಥಿತಿಯೊಳಗ ನಾನು ಹೆಣ ನೋಡಿದ್ದು ಇದ ಮದ್ಲು., ಆ ಹೆಣ ಎಷ್ಟು ಕೊಳತಿತ್ತು ಅಂದ್ರ ಆ ಕೊಳೆತ ದುವರ್ಾಸನೆ ಇನ್ನೂ ನನ್ನ ಮೂಗ್ನ್ಯಾಗ ಕಟ್ಟಿದ್ಹಾಂಗದ ' ಎಂದು ಆಂಜನೇಯ ಉತ್ತರಿಸಿದ.

     ' ಸಾರ್ ಹೆಣದ ಮೈಮ್ಯಾಲಿನ ಬಟ್ಟೆ ಬರೆ ಜನಿವಾರ ಉಡುದಾರ, ಅವನ ಜೋಬನ್ಯಾಗ ಸಿಕ್ಕ ಐವತ್ತೈದು ರೂಪಾಯಿ ಬಸ್ ಟಿಕೆಟ್ ಮತ್ತು ಲಾಂಚ್ ಟಿಕೆಟ್ ಎಲ್ಲ ನನ್ನ ಕಡೆ ಕೊಟ್ಟಾರ ಅವೆಲ್ಲ ಹೆಣ ಸೋರಿ ಮಳಿಗೆ ಸಿಕ್ಕು ತೊಯ್ದು ಹೋಗ್ಯಾವ ' ಎಂದ.

     ' ಬಟ್ಟಿ ಬರಿನೆಲ್ಲ ಹೊರಗಿಡು, ಅವನ ಜೋಬನ್ಯಾಗ ಸಿಕ್ಕ ಎಲ್ಲ ವಸ್ತುಗಳ್ನ ಅಲ್ಲೆ ಕಪಾಟಿನ  ಮ್ಯಾಲೆ ಇಡು. ಅವನ ಮೈಮ್ಯಾಲ ಜನಿವಾರ ಉಡದಾರ ಸಿಕ್ಕಾವ ಅಂದಮ್ಯಾಲ ಅವ ಬ್ರಾಹ್ಮಣರವನೋ ಜೈನರವನೋ ಇರಬೇಕು ' ಎಂದರು ಗಂಗಾಧರಯ್ಯ..

     ' ಇರಬಹುದು ಸಾರ್, ಅವನ ಬಡ್ಡೆ ಬರೆ ಹೊರಗಿಟ್ಟರ ಅವನ್ನ ನಾಯಿಗಳು ಎಳಕೊಂಡು ಹೋಗಬಹುದು, ಅದೂ ಅಲ್ದ ಅವುಗಳೊಳಗ ಇನ್ನು ಹುಳ ಇದ್ದರೂ ಇರಬಹುದು ' ಎಂದ ಆಂಜನೇಯ.

     ' ಅವನ್ನೆಲ್ಲ ಅಲ್ಲಿಟ್ಟು ನೀ ಮನಿಗೆ ಹೋಗಿ ಬಾ ' ಎಂದರು ಗಂಗಾಧರಯ್ಯ.. ಅಷ್ಟರಲ್ಲಿ ಪರಸಪ್ಪ ಮತ್ತು ರಾಮಾಂಜನೇಯ ರಾತ್ರಿ ಗಸ್ತು ಕರ್ತವ್ಯದಿಂದ ಮರಳಿ ಠಾಣೆಗೆ ಬಂದರು.

     ' ರಾಮಾಂಜನಿ ರಾತ್ರಿ ಗಸ್ತು ರಿಪೋರ್ಟ ಬರದ ಬಿಡು ಒಂದು ಸಹಿ ಹಾಕಿ ಮನಿಗೆ ಹೋಗಿ ಬಿಡ್ತೀನಿ ಕಣ್ಣು ಎಳಿಯಾಕ ಹತ್ಯಾವ ' ಎಂದ ಪರಸಪ್ಪ.

     ' ನೀನು ಅರಾಮಾಗಿ ಮನಿಗೆ ಹೋಗಿ ಮಲಗ್ತಿ, ನಾನು ಮನಿಗೆ ಹೋಗಿ ಎಂಟು ಗಂಟೇಕ ಬಂದು ಮಾಮೂಲಿ ಹಂಗ ಮತ್ತ ಕೆಲಸ ಮಾಡ್ಬೇಕು, ನೀನ ಒಂದೈದು ನಿಮಿಷ್ದಾಗ ರಿಪೋರ್ಟ ಬರದು ಇಟ್ಟು ಹೋಗ್ಬಿಡು, ನಾನು ಬಂದು ಸಹಿ ಹಾಕ್ತೇನಿ ' ಎಂದು ರಾಮಾಂಜನಿ ಮರು ಉತ್ತಿರಿಸಿದ.

     ' ಯಾಕಪಾ ಇವತ್ತೊಂದಿವಸ ನೀ ರಿಪೋರ್ಟ ಬರದರ ನಿನ್ನ ಕೈಯೇನು ಸವದು ಹೋಗ್ತದನು, ದಿವಸಾ ನಾವು ಹ್ಯಾಂಗ್ ಬರಿಬೇಕು ಹೇಳು ' ಎಂದ ಪರಸಪ್ಪ.

     ' ಅಲ್ಲಲೆ ಪರಸಾ ಇವತ್ತೊಂದು ದಿವಸ ಒಂದು ರಿಪೋರ್ಟ ಬರಿ ಅಂದರ ಇಷ್ಟು ಸೋಮಾರಿತನ ಮಾಡ್ತಿ, ದಿವಸಾ ನಾವು ಹ್ಯಾಂಗ ಪೇಜಗಟ್ಲೆ ಬೆಳಗಿಂದ ರಾತ್ರಿ ತನಕ ಕೊರಿಬೇಕು, ಪ್ರಸಂಗ ಬಿದ್ರ ಎಲ್ಲ ಕೆಲಸಾನೂ ಮಾಡ್ಬೇಕು ' ಎಂದ ರಾಮಾಂಜನಿ.

     ' ಅದು ನಿನ್ನ ಕರ್ಮ ಕಣಯ್ಯ ಅದಕ್ಕ ನಾನೇನು ಮಾಡ್ಲಿ ' ಎಂದ ಪರಸಪ್ಪ.

     ರಾಮಾಂಜನಿ ಬೀಟು ಪುಸ್ತಕ ಬರೆದು ಸಹಿ ಮಾಡಿ ಪರಸಪ್ಪನ ಮುಂದೆ ತಳ್ಳಿದ. ಅದನ್ನ ತನ್ನೆಡೆಗೆ ಎಳೆದು ಕೊಂಡ ಪರಸಪ್ಪ ' ನೋಡಪಾ ಇಷ್ಟು ಬರದಿಟ್ಟು ಬಟ್ರ ಮುಗೀತು ಸುಮ್ಮ ರಗಳಿ ಮಾಡ್ತಿ ಎಂದು ಸಹಿ ಮಾಡಿ, ತಗೋ ಇದನ್ನ ಅಲ್ಲಿಟ್ಟು ಹೋಗ್ಬಿಡು ' ಎಂದ.

     ' ಪರಸಾ ನಿಂದು ಭಾಳ ದಿಮಾಕು ಬಿಡ್ಲೆ, ನೀನೂ ಅವನ್ಹಂಗ ಒಬ್ಬ ಪೋಲಿಸ್ ನವನು ಅನ್ನೊದನ್ನ ಮರಿಬ್ಯಾಡ, ದೊಡ್ಡ ಆಫೀಸರ್ ಮಾಡಿದ್ಹಾಂಗ ಮಾಡ್ತಿಯಲ್ಲೋ ' ಎಂದರು ಗಂಗಾಧರಯ್ಯ.

     ಠಾಣೆಯ ಗೋಡೆ ಗಡಿಯಾರ ಬೆಳಗಿನ ಆರು ಗಂಟೆಯ ಸಮಯ ತೋರಿಸುತ್ತಿತ್ತು. ಕಸಗುಡಿಸದುವ ಕೆಲಸದ ಗೌರಮ್ಮ ಮಾಮೂಲಿನಂತೆ ಠಾಣೆಗೆ ಬಂದಳು. ಅವಳು ಬಂದುದನ್ನು ಗಮನಿಸಿದ ಗಂಗಾಧರಯ್ಯ ' ಗೌರಮ್ಮ ಆ ಮೂಲೆಯಲ್ಲಿ ಹೆಣದ ಮೈಮೇಲಿನ ಬಟ್ಟಿ ಬರಿ ಅದಾವ ನೀನು ಕಸಗುಡಿಸಿ ಆದ ಮ್ಯಾಲ ಅವನ್ನ ಒಗದು ಒಣಗಹಾಕಿ ಹೋಗಿ ಬಿಡು ಬಹಳ ವಾಸನೆ ಹೊಡಿತಾವ ' ಎಂದರು.

     ಸಿರ್ರನೆ ಸಿಟ್ಟಾದ ಗೌರಮ್ಮ ' ಹೆಣದ ಮೈಮ್ಯಾಲಿನ ಬಟ್ಟಿ ಗಿಟ್ಟಿ ತೊಳೆಯಾಕಿ ನಾನಲ್ಲ, ಅದು ನನ್ನ ಕೆಲಸಾ ಅಲ್ಲ, ಕಸ ಗೂಡಸೋದಷ್ಟ ನನ್ನ ಕೆಲಸ ' ಎಂದಳು ಗೌರಮ್ಮ.

     ' ಹಂಗಂದ್ರ ಹ್ಯಾಂಗಮ್ಮ ಅದು ನಿನ್ನ ಕೆಲಸ ನೀನು ಮಾಡಬೇಕು, ನಿನಗೇನು ಅನಗಾಲ ಹೇಳ್ತಾ ಇರ್ತೇವ ? ಅಪರೂಪಕ್ಕೊಮ್ಮೆ ಇಂಥ ಸಂಧರ್ಭ ಬರತಾವ ಮಾಡಬೇಕು ' ಎಂದು ಅವಳ ಮನ ಒಲಿಸಲು ನೋಡಿದರು.

          ' ಸರಿಯಾಗಿ ಹೇಳಿದೆ ನೋಡು ಗೌರಮ್ಮ ಕಸಗೂಡಸೋವ್ರು ಅಂದ್ರ ಅಷ್ಟು ಕೀಳಾಗಿ ಕಾಣಬಾರದು, ಸ್ವಲ್ಪ ಮನುಷ್ಯತ್ವ ಬೇಕು ' ಎಂದ ಪರಸಪ್ಪ.

     ' ಏನೋ ಪರಸ ! ಏನು ಮಾತಾಡ್ತಿ ! ನೀನು ನೀನು ಮನುಷ್ಯತ್ವದ ವಿಷಯ ಮಾತಾಡ್ತಿ ? ನಿನ್ನೆ ನಿನಗ ಅದ ನೇಣು ಹಾಕ್ಯೊಂಡ ಸತ್ತ ಕೇಸಿಗೆ ಸಮ್ಮಂಧ ಪಟ್ಟ್ಹಾಂಗ ಪಿಎಸ್ಐ ಜೊತೆಗೆ ಹೋಗು ಅಂದ್ರ ಇಲ್ಲದ ನಾಟ ಕ ಮಾಡ್ದಿ, ಮೂರು ದಿವಸ ಊರು ಬಿಟ್ಟು ಹೊರಗ ಹೋಗಿ ಬಂದ ಆಂಜನೇಯಗ ನಿನ್ನ ಕೆಲಸ ಅಮರಿಸಿದಿ, ಸ್ವಲ್ಪ ವಿಚಾರ ಮಾಡಿ ಮೈಮ್ಯಾಲ ಎಚ್ಚರ ಇಟಗೊಂಡು ಮಾತಾಡು. ಇಷ್ಟು ನೀ ಮಾತಾಡ್ತಿಯಲ್ಲ ಆಂಜನೇಯ ನಿನ್ನೆ ಹೋಗಿ ಬಂದಾನ ಹೆಣದ ಬಟ್ಟೆ ಬರೆನೆಲ್ಲ ಒಗಿಸಿ ಒಣಗಿಸಿ ಒಳಗಿಡಿಸು, ಅಷ್ಟರ ಮಾಡು ನೋಡೋಣ ' ಎಂದು ಏರಿದ ದನಿಯಲ್ಲಿಗಂಗಾಧರಯ್ಯ ಮಾತನಾಡಿದರು.

     ' ಹೆಣದ ಬಟ್ಟಿ ತೊಳಿಯಾಕ ತೊಳಸಾಕ ನಾ ಇರೋದೇನ್ರಿ ? ಆ ಡ್ಯೂಟಿಗೆ ಹೋಗಿ ಬಂದವರು ಅದನ್ನ ಪೂರಾ ಮಾಡಿ ಮುಗಸಬೇಕು, ಅದು ಬಿಟ್ಟು ಯಾರದೋ ಕೆಲಸ ಯಾರಿಗೋ ಹೇಳೋದಲ್ಲ ' ಎಂದು ಪರಸಪ್ಪ ತಾನೂ ಏರಿದ ದನಿಯಲ್ಲಿ ಪ್ರತಿ ಮಾತನಾಡಿದ.

     ' ನೀನೂ ಮಾಡೋಲ್ಲ ಆ ಗೌರಮ್ಮಳಿಗೂ ಮಾಡಬ್ಯಾಡ ಅಂತ ಪ್ರಚೋದನಾ ಮಾಡ್ತಿ, ಇದೆಲ್ಲ ಏನು ? ' ಎಂದರು ಗಂಗಾಧರಯ್ಯ..

     ' ಬೇಕಾದವರು ಸಮ್ಮಂಧ ಪಟ್ಟವರು ಮಾಡಿಕೋತಾರ. ನೀವ್ಯಾಕ ಎಲ್ಲಾನೂ ನಿಮ್ಮ ತಲಿಮ್ಯಾಲ ಹೊತಗೊಂಡವರ ಹಾಂಗ ಮಾಡ್ತೀರಿ ಸುಮ್ಮನಿರ್ರಿ ' ಎಂದ ಪರಸಪ್ಪ.

     ' ಏನು ತಲೆ ಕೆಟ್ಟವರ ಹಾಂಗ ಹುಚ್ಚುಚ್ಚಾಗಿ ಮಾತಾಡ್ತೀಯೋ, ಈಗನ ಹೆಣದ ಬಟ್ಟಿ ವಾಸನಿ ಸ್ಟೇಶನ್ ತುಂಬ ಇಡಗೇದ, ಅದನ್ನ ತೊಳಿಸಿ ಸ್ವಷ್ಛಗೊಳಿಸಿ ಇಡಸೋಣ ಅಂದ್ರ ಏನೇನೋ ಹೇಳ್ತಿ. ಇದು ಎಲ್ಲರದೂ ಕೆಲಸ ಅವರದು ಇವರದು ಅಂತೆಲ್ಲ ಏನಿಲ್ಲ, ನೀನು ಬೇಜವಾಬ್ದಾರಿಯಿಂದ ಏನೇನೋ ಮಾತಾಡ್ತಿ, ಎಲ್ಲಾರೂ ನಿನ್ನಂಗ ಮಾಡಲಿಕ್ಕೆ ಆಗತದನು ' ಎಂದರು ಗಂಗಾಧರಯ್ಯ.

     ಈ ಎಲ್ಲ ಅಹಿತಕರ ಘಟನೆಗಳಿಂದ ಬೇಸರಗೊಂಡ ಅವರು ಅನ್ಯ ಮನಸ್ಕರಾಗಿ ಕಿಟಕಿಯ ಮೂಲಕ ರಸ್ತೆಯನ್ನು ದಿಟ್ಟಿಸುತ್ತ ಕುಳಿತರು. ಸಮವಸ್ತ್ರದಲ್ಲಿ ಠಾಣಾ ಬರಹಗಾರ ರಾಮಾಂಜನೇಯ ಮತ್ತೆ ಠಾಣೆಗೆ ಬಂದ.

     ' ಏನೋ ರಾಮಾಂಜನಿ ಈಗಿನ್ನೂ ಮನಿಗೆ ಹೋದವ ಮತ್ತ ಬಂದ ಬಿಟ್ಟೆಲ್ಲೋ ! ಸ್ವಲ್ಪ ವಿಶ್ರಾಂತಿ ತುಗೊಂಡು ಬರಬೇಕಿತ್ತು ' ಎಂದರು ಗಂಗಾಧರಯ್ಯ.

     ' ಇಲ್ಲಾ ಸಾರ್ ಕೋರ್ಟಗೆ ಪ್ರೊಪರ್ಟಿ, ಪ್ರೊಸೆಸ್ಸ ರಿಪೋಟ್ರ್ಸ ಮತ್ತು ಟಪಾಲು ಕಳಸ ಬೇಕು, ಅವನ್ನೆಲ್ಲ ರೆಡಿ ಮಾಡಬೇಕು ಅದಕ ಬಂದೆ ' ಎಂದ ರಾಮಾಂಜನೇಯ.

     .' ನನ್ಮಗನ ಸ್ಟೇಶನ್ ಎಲ್ಲಾ ನೀನೊಬ್ಬನ ತಲಿಮ್ಯಾಲ ಹೊತಗೊಂಡ್ಬಿಟ್ಟಿ ನೋಡು, ನಿನಗೇನು ಡಬಲ್ ಸಂಬಳ ಕೊಡ್ತಾರೇನು ? ಹೋಗೋ ಪುರಸೊತ್ತು ಇಲ್ಲದ್ಹಾಂಗ ಮತ್ತ ಬಂದ ಬಿಟ್ಟಾನೋಡು ' ಎಂದ ಪರಸಪ್ಪ.

     ' ಅಯ್ಯೋ ! ನೀನಿನ್ನೂ ಇಲ್ಲೆ ಇದ್ದೀಯಾ, ಆವಾಗ್ಲೇನೆ ಕಣ್ಣು ಎಳಿತಾವು ಅಂತ ಕೊಸ ಕೊಸ ಮಾಡ್ತಿದ್ದಿ, ಮನಿಗೆ ಹೋಗೋದು ಬಿಟ್ಟು ಇನ್ನೂ ಇಲ್ಲೆ ಯಾಕ ಕುಂತಿ ? ' ಎಂದ ರಾಮಾಂಜನಿ.

     ' ಯಾಕ ಕುಂತಿ ಅಂದ್ರ ? ಮಗನ ನಮ್ಮ ಗಂಗಾಧರ ಸಾಹೇಬ್ರು ಒಬ್ಬರ ಕುಂತಾರ ಅವರಿಗೆ ಕಂಪನಿ ಕೊಡೋಣ ಅಂತ ಕುಂತೇನಿ, ನಾವೆಲ್ಲ ನಿಮ್ಮಂಗ ಅಲ್ಲಲೆ ' ಎಂದ ಪರಸಪ್ಪ.

     ' ಏನ್ ಸಾರ್ ಇದು ! ಪರಸ ನಿಮ್ಮ ಬಗ್ಗೆ ಇಷ್ದು ವಿಶ್ವಾಸದಿಂದ ಮಾತಾಡ್ಲಿಕ್ಕೆ ಹತ್ಯಾನ ಏನ್ ಸಮಚಾರ ? ಸೂರ್ಯ ಏನರ ಇವತ್ತ ಪಶ್ಚಿಮದಾಗ ಹುಟ್ಟಿದ್ನೇನು ?' ಎಂದ ರಾಮಾಂಜನಿ.

    

                                                                                                    ( ಮುಂದುವರಿದುದು )

     ಅಪರಿಚಿತ ಕಥೆಯ ಭಾಗ 1 ರಿಂದ 4 ಕ್ಕೆ  ಲಿಂಕ್   :-www.sampada.net/blog/h-patil                           

                              ಭಾಗ 5 ರಿಂದ 8 ಕ್ಕೆ ಲಿಂಕ್ :-www.sampada.net/blog/h-patil