ರಾ ಗ - ಆನಂದಭೈರವಿ : ತಾ ಳ - ಏಕತಾಳ

ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ
ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ | ಪ |

ಭಾಸುರಚರಿತನೆ ಭೂಸುರವಂದ್ಯನೆ ಶ್ರೀಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ |
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ ದೇಶಿಕರೊಡೆಯನೆ ರಾಘವೇಂದ್ರ ರಾಯ ಬಾರೋ | ೧ |

ವಂದಿಪ ಜನರಿಗೆ ಮಂದಾರತರುವಂತೆ ಕುಂದದಭೀಷ್ಟೆಯ ಸಲಿಸುತಿಪ್ಪ ರಾಯ ಬಾರೋ |
ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮಣಿ ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ | ೨ |

ಆರು ಮೂರು ಏಳು ನಾಲ್ಕು ಎಂಟು ಗ್ರಂಥಸಾರಾರ್ಥತೋರಿಸಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ |
ತೋರಿಸಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞಸೂಗಳರಸನೆ ರಾಘವೇಂದ್ರ ರಾಯ ಬಾರೋ | ೩|

ರಾಮಪದಸರಸೀರುಹಭೃಂಗ ಭಕ್ತಕೃಪಾಪಾಂಗ ಭ್ರಾಮಕಜನರ ಸನ್ಮಾನಭಂಗ ರಾಯ ಬಾರೋ |
ಭ್ರಾಮಕಜನರ ಸನ್ಮಾನಭಂಗ ಮಾಡಿದ ಧೀಮಂತರೊಡೆಯನೆ ರಾಘವೇಂದ್ರ ರಾಯ ಬಾರೋ | ೪ |

ಭೂತಳನಾಥನ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದೆ ಮಹಿಷಿಯ ರಾಯ ಬಾರೋ |
ಪ್ರೇತತ್ವ ಕಳೆದೆ ಮಹಿಷಿಯ ಶ್ರೀ ಜಗನ್ನಾಥವಿಟ್ಠಲನ ಪ್ರೀತಿಪಾತ್ರ ರಾಘವೇಂದ್ರ ರಾಯ ಬಾರೋ | ೫ |