( ರಾಗ ಕಲ್ಯಾಣಿ. ಅಟ ತಾಳ)

ಸದ್ದು ಮಾಡಲು ಬೇಡವೊ, ನಿನ್ನ ಕಾಲಿಗೆ
ಬಿದ್ದು ನಾ ಬೇಡಿಕೊಂಬೆ ||ಪ||
ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ-
ದಿದ್ದದ್ದು ಕಂಡರೇನೆಂಬುವರೊ ರಂಗ ||

ಬಳೆ ಘಲ್ಲುಕೆನ್ನದೇನೊ, ಕಯ್ಯ ಪಿಡಿದು
ಎಳೆಯದಿರೋ ಸುಮ್ಮನೆ
ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-
ರಳ ಪದಕಗಳು ಧ್ವನಿಗೆಯ್ಯುವುವು ರಂಗ ||

ನೆರಿಗೆ ಕೈ ಕೊಡದಿರೊ, ಕಾಂಚಿಯದಾಮ
ಉಡಿಗಂಟು ಧ್ವನಿಗೆಯ್ಯದೇ
ಕರದುಟಿಯನು ಸವಿದು ಚಪ್ಪರಿಸಲು
ತರವಲ್ಲ ಗಂಡ ಮತ್ಸರವ ತಾಳುವನಲ್ಲ ||

ನಾಡಮಾತುಗಳೇತಕೊ, ಸಂಗೀತವು
ಪಾಡುವ ಸಮಯವೇನೋ
ಗಾಡಿಗಾರ ಶ್ರೀ ಪುರಂದರವಿಠಲನೆ
ಪಾಡಿ ಪಂಥಾಗಳೊಡಗೂಡುವ ಸಮಯಕ್ಕೆ ||