ಕೊಡು ಬೇಗ ದಿವ್ಯಮತಿ ಸರಸ್ವತಿ |ಪ|

ಮ್ರುಡ ಹರಿಹಯ ಮುಖರೊಡೆಯಳೆ ನಿನ್ನಯ | ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ |ಅ ಪ|

ಇಂದಿರಾ ರಮಣನ ಹಿರಿಯ ಸೊಸೆಯು ನೀನು | ಬಂದೆನ್ನ ವದನದಿ ನಿಂದು ನಾಮವ ನುಡಿಸೆ |೧|

ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ | ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ |೨|

ಪತಿತ ಪಾವನೆ ನೀನೆ ಗತಿಯೆಂದು ನಂಬಿದೆ | ಸತತ ಪುರಂದರ ವಿಠಲನ ತೋರಿಸೆ |೩|