ನೆರೆ ನಂಬಿದೆ ಮದ್‍ಹೃದಯಮಂಟಪದೊಳು | ಪರಿಶೋಭಿಸುತಿರು ಪಾಂಡುರಂಗ |ಪ|

ಶರಣಜನರ ಸಂಸಾರಮಹಾಭಯ | ಹರಣ ಕರುಣ ಸಿರಿ ಪಾಂಡುರಂಗ | ಅ ಪ |

ನೆರೆದಿಹ ಬಹು ಜನರೊಳಿದ್ದರು ಮನ | ಸ್ಥಿರವಿಡು ನಿನ್ನಲಿ ಪಾಂಡುರಂಗ |
ಪರಿಪರಿ ಕೆಲಸವು ನಿನ್ನ ಮಹಾಪೂಜೆ | ನಿರುತ ಎನಗೆ ಕೊಡು ಪಾಂಡುರಂಗ | ೧ |

ಪರದೇವನೆ ನಿನ್ನ ಲೀಲಾಸ್ಮೃತಿಯನು | ನಿರುತ ಎನಗೆ ಕೊಡು ಪಾಂಡುರಂಗ |
ಪರರಾಪೇಕ್ಷೆಯ ಬಿಡಿಸಿ ನಿರಂತರ | ಪರಗತಿ ಪಥ ತೋರೋ ಪಾಂಡುರಂಗ | ೨ |

ಸುಖವಾಗಲಿ ಬಹು ದುಃಖವಾಗಲಿ | ಸಖ ನೀನಾಗಿರು ಪಾಂಡುರಂಗ |
ನಿಖಿಲಾಂತರ್ಗತ ವ್ಯಾಸವಿಠಲ ತವ | ಮುಖಪಂಕಜ ತೋರೋ ಪಾಂಡುರಂಗ | ೩ |