( ರಾಗ ಪೂರ್ವಿ. ರೂಪಕ ತಾಳ)

ಯಾತಕ್ಕೆ ದುರಾಶೆ ಎಲೆ ಮನವೆ ||ಪ||
ಎಲೆ ಮನವೆ ನೀ ತಿಳಿ ಮನವೆ ನಿನಗ್ಯಾತಕ್ಕೆ ದುರಾಶೆ ||ಅ||

ಜನ್ಮ ಜನ್ಮಾಂತರದ ಪೂಜೆ ಫಲವು
ಅನುಭವಿಸಲ್ಲದೆ ಬಿಡದೆಲೊ ಮನವೆ ||

ಪಣೆಯಲ್ಲಿ ಬರೆದ ಬ್ರಹ್ಮನ ಲಿಪಿಯ
ಮೀರುವುದುಂಟೆ ಜಗದೊಳು ಮನವೆ ||

ಪುರಂದರವಿಠಲನ ಚರಣಕಮಲಗಳ
ಅನುದಿನ ಭಜಿಸಿ ಬದುಕೆಲೊ ಮನವೆ ||