( ರಾಗ ಗೌಳಿಪಂತು/ಸೌಳವಂತು. ಛಾಪು ತಾಳ)

ಯಾವ ಕರ್ಮವೋ, ಇದು
ಯಾವ ಪುಣ್ಯವೋ ||ಪ||

ಸತ್ತವನು ಎತ್ತ ಹೋದ
ಸತ್ತು ತನ್ನ ಜನ್ಮಕ್ಹೋದ
ಸತ್ತವನು ಉಂಬುವನೆಂದು
ನಿತ್ಯ ಪಿಂಡ ಇಕ್ಕಿದರೆ ||

ಎಳ್ಳು ದರ್ಭೆ ಕೈಲಿ ಪಿಡಿದು
ಪಿತೃತೃಪ್ತಿಯೆಂದು ಬಿಡಲು
ಎಳ್ಳು ಮೀನು ನುಂಗಿತು
ದರ್ಭೆ ನೀರೊಳು ಹರಿದುಹೋಯಿತು ||

ಎಡಕ್ಕೆ ಬಲಕ್ಕೆ ಎಂದು ಕೇಳಿ
ಎಡಕ್ಕೆ ತೋರಿಸಿ ಬಲಕ್ಕೆ ತೋರಿಸಿ
ಕಡು ದೇವತೆಯನ ಬರಿಸಿ
ಕಠಿನವಸ್ತು ಕೇಳಿರುತಾರೆ ||

ಮಂತ್ರಾಕ್ಷತೆಯ ಕೈಲಿ ಕೊಟ್ಟು
ಸ್ವರ್ಗವನ್ನು ಹೋಗೆಂದರೆ
ಮಂತ್ರವೆಲ್ಲೊ ಅಕ್ಷತೆಯೆಲ್ಲೊ
ಅವರೆಲ್ಲೊ ಇವರೆಲ್ಲೊ ||

ಹೇಳುವನು ಅಜ್ಞಾನಿ
ಕೇಳುವನು ಅವಿವೇಕಿ
ಹೇಳುವ ಕೇಳುವ ಇಬ್ಬರ ಸೊಲ್ಲ
ಪುರಂದರವಿಠಲ ಬಲ್ಲ ||