(ರಾಗ ಪಂತುವರಾಳಿ ಛಾಪುತಾಳ)
ಯಾವಾಗಲು ಚಿಂತೆ ಜೀವಕ್ಕೆ ||ಪ||
ಈ ಜೀವ ಒಂದು ಪರಿಯಾಗೋ ತನಕ ||
ಹೆಂಡತಿಲ್ಲದ ಚಿಂತೆ , ಹೆಂಡತಿದ್ದರು ಚಿಂತೆ
ಚಂಡಿ ಕುರೂಪಿಯಾದರು ಚಿಂತೆಯು
ಕೊಂಡನಾಗಿ ಪೊತ್ತು ತಿರುಗುವ ಚಿಂತೆ ಭೂ-
ಮಂಡಲದೊಳಗೆಲ್ಲ ಚಿಂತೆ ಕಾಣಣ್ಣ ||
ಓಲೆಗಿಲ್ಲದ ಚಿಂತೆ , ಓಲೆಗಾದರು ಚಿಂತೆ
ಮೇಲೆ ಸಂಬಳ ಬಾರದ ಚಿಂತೆಯು
ಸಾಲ ಕೊಡೋ ಚಿಂತೆ , ಸಾಲ ತೆಗೆಯೋ ಚಿಂತೆ
ಮೂರ್ಲೋಕದೊಳಗೆಲ್ಲ ಚಿಂತೆ ಕಾಣಣ್ಣ ||
ಮನೆಯಿಲ್ಲದ ಚಿಂತೆ , ಮನೆಯಾದರು ಚಿಂತೆ
ಮನೆಯ ವಾರ್ತೆ ನಡೆಯದ ಚಿಂತೆಯು
ಮನಸಿಜನಯ್ಯ ಶ್ರೀ ಪುರಂದರವಿಠಲನ
ನೆನೆದರೆ ಚಿಂತೆ ನಿಶ್ಚಿಂತೆ ಕಾಣಣ್ಣ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!