(ರಾಗ ಆರಭಿ ಆದಿತಾಳ)

ಲಾಲಿಸಿದಳು ಮಗನ, ಯಶೋದೆ,
ಲಾಲಿಸಿದಳು ಮಗನ |ಪ||

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||

ಬಾಲಕನೆ ಕೆನೆಹಾಲು ಮೊಸರನೀವೆ
ಲೀಲೆಯಿಂದಲಿ ಎನ್ನ ತೋಳಲಿ ಮಲಗೆಂದು ||

ಮುಗುಳುನಗೆಯಿಂದ ಮುದ್ದು ತಾ ತಾರೆಂದು
ಜಗದೊಡೆಯನ ಶ್ರೀ ಪುರಂದರವಿಠಲನ ||