(ರಾಗ ನಾದನಾಮಕ್ರಿಯೆ )

ಊಟಕ್ಕೆ ಬಂದೆವು ನಾವು , ಮಿಮ್ಮ
ಆಟಪಾಟವ ಬಿಟ್ಟು ಅಡುಗೆ ಮಾಡಮ್ಮ ||ಪ||

ಕತ್ತಲಿಟ್ಟಾವಮ್ಮ ಕಣ್ಣು , ಬಾಯಿ
ಬತ್ತಿ ಬರುತಲಿದೆ ಕೈಕಾಲು ಝುಮ್ಮು
ಹೊತ್ತು ಹೋಗಿಸಬೇಡವಮ್ಮ , ಒಂದು
ತುತ್ತಾದರು ಇತ್ತು ಸಲಹು ನಮ್ಮಮ್ಮ ||

ಒಡಲೊಳಗೇ ಉಸಿರಿಲ್ಲ , ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ ದೋಷ ತಟ್ಟುವುದು, ಒಂದು
ಹಿಡಿ ಅಕ್ಕಿಯಿಂದಲಿ ಕೀರ್ತಿ ಬಾಹೋದು ||

ಹೊನ್ನುರಾಸಿಯ ತಂದು ಸುರಿಯೆ , ಕೋಟಿ
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನದಾನಕ್ಕಿನ್ನು ಸರಿಯೆ , ಪ್ರ-
ಸನ್ನ ಪುರಂದರವಿಟ್ಠಲ ದೊರೆಯೆ ||