(ರಾಗ ಪೂರ್ವಕಲ್ಯಾಣಿ ಆದಿತಾಳ)

ಕೊಟ್ಟವರು ಸರಿಯೆ , ಕೊಡದೆ ಬಿಟ್ಟವರು ಸರಿಯೆ ||ಪ||

ಇಕ್ಕಿದವರಿಗುಂಟು , ಮದದಲಿ ಸೊಕ್ಕಿದರೇನುಂಟು
ರಕ್ಕಸಾಂತಕ ನಮ್ಮ, ಲಕುಮಿಪತಿಯ ಮೊರೆ
ಹೊಕ್ಕವರಾದ ಭಜಕರಿಗೆ ||

ಅರಸನದರು ಸರಿಯೆ , ನಮಗೆ , ತಿರುಕನಾದರು ಸರಿಯೆ
ಸರಸವಿರಸದಿಂ ನುಡಿದರೇನು ನರ-
ಹರಿಪದಕಮಲವ ನಿರತ ಭಜಕರಿಗೆ ||

ಪುಟ್ಟಿಸಿದ ದೊರೆಯು , ನಮಗೆ , ಹೊಟ್ಟೆಗೆ ಕೊಡದಿಹನೆ
ಬೆಟ್ಟದೊಡೆಯ ನಮ್ಮ , ಪುರಂದರವಿಠಲನ
ಗಟ್ಟಿಯಾಗಿ ನಂಬಿದ ದಾಸರಿಗೆ ||