(ರಾಗ್ ಬೇಹಾಗ್ ಆದಿತಾಳ)

ಕಲಿಯುಗದೊಳು ಹರಿನಾಮವ ನೆನೆದರೆ
ಕುಲಕೋಟಿಗಳುದ್ಧರಿಸುವುವು ||ಪ||
ಸುಲಭದ ಮುಕುತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆಮನವೆ ||ಅ||

ಸ್ನಾನವನರಿಯೆನು ಮೌನವನರಿಯೆನು
ಧ್ಯಾನವನರಿಯೆನೆಂದೆನಬೇಡ
ಜಾನಕಿವಲ್ಲಭ ದಶರಥನಂದನ
ಗಾನವಿನೋದನ ನೆನೆಮನವೆ ||

ಅರ್ಚಿಸಲರಿಯೆನು ಮೆಚ್ಚಿಸಲರಿಯೆನು
ತುಚ್ಛನು ನಾನೆಂದೆನಬೇಡ
ಅಚ್ಯುತಾನಂತ ಗೋವಿಂದ ಮುಕುಂದನ
ಇಚ್ಛೆಯಿಂದ ನೀ ನೆನೆಮನವೆ ||

ಜಪವೊಂದರಿಯೆನು ತಪವೊಂದರಿಯೆನು
ಉಪದೇಶವಿಲ್ಲೆಂದೆನಬೇಡ
ಅಪಾರಮಹಿಮ ಶ್ರೀಪುರಂದರವಿಠಲನ
ಉಪಾಯದಿಂದಲಿ ನೆನೆಮನವೆ ||