( ರಾಗ ತೋಡಿ ಆದಿತಾಳ)

ಮನ್ನಾರು ಕೃಷ್ಣಗೆ ಮಂಗಳ , ಜಗವ
ಮನ್ನಿಸಿದೊಡೆಯಗೆ ಮಂಗಳ ||ಪ||

ಬೊಮ್ಮನ ಪಡೆದಗೆ , ಭಕ್ತರುದ್ಧಾರಿಗೆ
ಕಮ್ಮಗೋಲನಯ್ಯಗೆ ಮಂಗಳ
ಧರ್ಮರಕ್ಷಕನಿಗೆ ದಾನವಶಿಕ್ಷಗೆ
ನಮ್ಮ ರಕ್ಷಿಸುವಗೆ ಮಂಗಳ ||

ತುರುಗಳ ಕಾಯ್ದಗೆ ಕರುಣಾಕರನಿಗೆ
ಗಿರಿಯನೆತ್ತಿದವಗೆ ಮಂಗಳ
ವರದ ತಿಮ್ಮಪ್ಪಗೆ ವಾರಿಜನಾಭಗೆ
ಹರಿ ಸರ್ವೋತ್ತಮನಿಗೆ ಮಂಗಳ ||

ದೇವಕಿದೇವಿಯ ತನಯಗೆ ಮಂಗಳ
ದೇವ ತಿಮ್ಮಪ್ಪಗೆ ಮಂಗಳ
ಮಾವನ ಕೊಂದು ಮಲ್ಲರ ಮಡುಹಿದ
ಪುರಂದರವಿಠಲಗೆ ಮಂಗಳ ||