(ರಾಗ ಧನಶ್ರೀ ಆದಿತಾಳ)

ಕರುಣಿಸು ನರಹರಿ ಹರಿಗೋವಿಂದ
ನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ||

ಮಾತುಗಳಾಡದೆ ಮೌನದಿಂದಿದ್ದರೆ
ಭೂತ ಬಡೆದವನೆಂದು ಕರೆಯುವರೊ
ಚಾತುರ್ಯದಿಂದಲಿ ಮಾತುಗಳಾಡಲು
ಪಿತ್ತೇರಿ ಬಲು ಬಾಯಿಬಡಕನೆಂಬುವರಯ್ಯ ||

ಬಲು ಚೆನ್ನಿಗತನವ ತಾನು ಮಾಡಲು
ಬಲು ಹಮ್ಮಿಗನೆಂದು ಬೈಯುವರೊ
ಸುಲಭದಿಂದಲಿ ನಿಗರ್ವಿಯಾಗಿದ್ದರೆ
ಕಲಿಯುಗದಲಿ ಮಂದಮತಿಯೆಂಬುವರಯ್ಯ ||

ಮಡಿಯೆಂದು ನೇಮವ ಮಾಡುತಲಿದ್ದರೆ
ಮಡಿಯವನೆಂದು ಬೈಯುವರಯ್ಯ
ಮಡಿನೇಮ ಜಪತಪವ ಬಿಟ್ಟು ತಿರುಗಲಾಗಿ
ನಡತೆಹೀನನೆಂದು ನಿಂದಿಸುತಿಹರೊ ||

ನಿಷ್ಠೆಲಿ ಒಪ್ಪತ್ತೂಟವನುಂಡರೆ
ನಿಷ್ಠೆಯತನ ಸುಟ್ಟಿತೆಂಬೋರು
ಘಟ್ಟ್ಯಾಗಿ ಎರಡು ಮೂರು ಬಾರಿ ಉಂಡರೆ
ಹೊಟ್ಟೆಹೊರಕನೆಂದು ಬೈಯುವರಯ್ಯ ||

ನರಲೋಕದೊಳಿನ್ನು ಪುಟ್ಟಿಸದಿರು , ನಿನ್ನ
ಮೊರೆಯ ಹೊಕ್ಕೆನೊ ಮೋಕ್ಷದಾಯಕನೆ
ಅರವಿಂದನಯನ ಶ್ರೀಪುರಂದರವಿಠಲ
ಕರುಣದಿಂದಲಿ ನೀ ರಕ್ಷಿಸೊ ಎನ್ನ ||