ರಾಗ ಸೌರಾಷ್ಟ್ರ/ಅಟ್ಟ ತಾಳ

ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ ||

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ || ಅನು ಪಲ್ಲವಿ ||

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹ್ಯಾಗೆ ಬಿಟ್ಟರು ಹೇಳೊ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದೆನೊ ಭೂತ || ೧ ||

ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹ್ಯಾಗೆ ಬಿಟ್ಟಳು ಹೇಳೊ ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ || ೨ ||

ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹ್ಯಾಗೆ ಬಿಟ್ಟರು ಹೇಳೊ ಕೋತಿ
ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು
ಕೊಂದ್‍ಹಾಕಿ ಬಂದೆನೊ ಭೂತ || ೩ ||

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಳೊ
ಅವಳ ನೋಡಬಂದೆ ಭೂತ || ೪ ||

ದಕ್ಷಿಣಪುರಿ ಲಂಕಾ ದಾನವರಿಗಲ್ಲದೆ
ತ್ರಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆ ಎನಗಿಲ್ಲ
ಈ ಕ್ಷಣದಿ ತಪ್ಪಿಸಿಕೊಂಡೆ ಭೂತ || ೫ ||

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ಯಾತಕೊ ಕೋತಿ
ನಾ ತಾಳಿಕೊಂಡಿಹೆನೊ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ || ೬ ||

ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟುಮಂದಿಯಿದ್ದಾರೊ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನುಕೋಟಿಯೊ ಭೂತ || ೭ ||

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂದೆ
ಯಾವರಸಿನ ಭಂಟ ಕೋತಿ
ಚೆಲ್ವಯೋಧ್ಯಾಪುರದರಸು ಜಾನಕಿಪತಿ
ರಾಮಚಂದ್ರನ ಭಂಟ ಭೂತ || ೮ ||

ಸಿರಿ ರಾಮಚಂದ್ರನು ನಿನ್ನರಸನಾದರೆ
ಆತ ಮುನ್ನಾರು ಹೇಳೊ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ
ಶ್ರೀ ಪುರಂದರವಿಠಲನೊ ಭೂತ || ೯ ||

~~~ * ~~~
[ಇದು ಹನುಮಂತ ಮತ್ತು ರಾವಣ ಇವರ ನಡುವೆ ನಡೆದ ಸಂವಾದ.
ರಾವಣನು ಹನುಮಂತನನ್ನು ಕೋತಿಯೆಂದು ಕರೆದರೆ ಹನುಮಂತನು ರಾವಣನನ್ನು ಭೂತನೆಂದು ಕರೆಯುತ್ತಾನೆ.
ಇದರಲ್ಲಿ ಹನುಮಂತನ ಸಾಹಸದ ಸ್ವಾರಸ್ಯವಾದ ವರ್ಣನೆಯಿದೆ.]

ಏಳೇಳು ಶರಧಿಯು ಏಕವಾಗಿದೆ - ಸಮುದ್ರಮಧ್ಯದಲ್ಲಿರುವ ಲಂಕಾಪುರವು ದುರ್ಗಮವಾದುದೆಂದೂ, ಅಜೇಯವಾದುದೆಂದೂ ಪ್ರತೀತಿಯಿದ್ದಿತು.
ಹನುಮಂತನು ಅಲ್ಲಿಗೆ ಬಂದುದನ್ನು ತಿಳಿದು ಲಂಕಾಧಿಪತಿಯಾದ ರಾವಣನಿಗೇ ಆಶ್ಚರ್ಯವಾಯಿತು.
ಮಕರಿ ಮತ್ಸ್ಯ - ಮೊಸಳೆ ಮೀನು.
ತ್ರಕ್ಷಾದ್ಯರಿಗಳವಲ್ಲ - ತ್ರಕ್ಷನೆಂದರೆ ಮುಕ್ಕಣ್ಣ, ಶಿವ; ಶಿವನೇ ಮೊದಲಾದ ದೇವತೆಗಳು ಕೂಡ ದಾನವರ ಬೀಡಾದ ಲಂಕೆಗೆ ಬರಲಾರರು.
ಪಕ್ಷಿಧ್ವಜ - ಗರುಡಧ್ವಜ.