ರಂಗನಾಯಕ ರಾಜೀವಲೋಚನ
ರಮಣನೆ ಬೆಳಗಾಯಿತೇಳೆನುತ |ಪ|

ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನುತ |ಅ ಪ|

ಪಕ್ಷಿ ರಾಜನು ಬಂದು ಬಾಗಿಲಲ್ಲಿ ನಿಂದು
ಅಕ್ಷಿತೆರೆದು ಬೇಗ ಈಕ್ಷಿಸೆಂದು
ಪಕ್ಷಿ ಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತಾ
ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ||

ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕರಮುಗಿದು ಓಲೈಪರು
ಘನ ಶುಕ ಶೌನಕ ವ್ಯಾಸ ವಾಲ್ಮೀಕರು
ನೆನೆದು ನೆನೆದು ಕೊಂಡಾದುವರು ಹರಿಯೇ||

ಸುರರು ಕಿನ್ನರರು ಕಿಂಪುರುಷರು ಉರಗರು
ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದು ಉದಯಾಚಲದಿ ನಿಂದು
ಕಿರಣದೋರುವನು ಭಾಸ್ಕರನು ಶ್ರೀ ಹರಿಯೆ||

ಪದುಮನಾಭನೆ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಧಿಯ ಕಡೆವರೇಳೊ ಮಧುಸೂದನ ಕೃಷ್ಣ||

ಮುರ ಮಥನನೆ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲೆ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೋ ಹರಿಯೆ||