( ರಾಗ - ಭೈರವಿ( ಸಾರಂಗ) ಆದಿತಾಳ (ತ್ರಿತಾಳ) )

ಪ್ರಾಣದೇವ ನೀನಲ್ಲದೆ ಕಾಯ್ವರ
ಕಾಣೆನೋ ಜಗದೊಳಗೆ , ಮುಖ್ಯ- ||ಪ||

ಪ್ರಾಣಾಪಾನವ್ಯಾನೋದಾನ ಸ-
ಮಾನನೆನಿಪ ಮುಖ್ಯಪ್ರಾಣ ನೀನಲ್ಲದೆ ||ಅ.ಪ||

ವಾಸವ ಕುಲಿಶದಿ ಘಾಸಿಸೆ ಜೀವರ
ಶ್ವಾಸ ನಿರೋಧಿಸಿದೆ
ಆ ಸಮಯದಿ ಕಮಲಾಸನ ಪೇಳಲು
ನೀ ಸಲಹಿದೆ ಜಗವ ಮುಖ್ಯ- ||೧||

ಅಂಗದ ಪ್ರಮುಖ ಪ್ಲವಂಗರು ರಾಮನ
ಅಂಗನೆಯನು ಪುಡುಕೆ
ತಿಂಗಳು ಮೀರಲು ಕಪಿವರ-
ಪುಂಗವ ಪಾಲಿಸಿದೆ ಮುಖ್ಯ- ||೨||

ಪಾವನ ಪಾಶದಿ ರಾವಣ ನೀಲ ಸು-
ಗ್ರೀವ ಮುಖ್ಯರ ಬಿಗಿಯೆ
ಸಾವಿರದೈವತ್ತು ಗಾವುದದಲ್ಲಿಹ ಸಂ-
ಜೀವನವನು ತಂದೆ ಮುಖ್ಯ- ||೩||

ಪರಿಸರ ನೀನಿರೆ ಹರಿತಾನಿರುವನು
ಇರದಿರೆ ತಾನಿರನು
ಕರಣ ನಿಯಾಮಕ ಸುರರ ಗುರುವೇ ನೀ-
ಕರುಣಿಸೆ ಕರುಣಿಸುವ ಮುಖ್ಯ- ||೪||

ಭೂತೇಂದ್ರಿಯ ದಧಿನಾಥ ನಿಯಾಮಕ
ಆತೈಜಸ ಹರನ
ತಾತನೆನಿಪ ಜಗನ್ನಾಥವಿಠ್ಠಲನ
ಪ್ರೀತಿಪಾತ್ರನಾದೆ ಮುಖ್ಯ- ||೫||