(ರಾಗ ಕಾಂಭೋಜ ಏಕತಾಳ)
ಯಾದವ ನೀ ಬಾ ಯದುಕುಲನಂದನ |
ಮಾಧವ ಮಧುಸೂಧನ ಬಾರೋ ||
ಸೋದರ ಮಾವನ ಮಧುರೆಲಿ ಮಡುಹಿದ ಯ-
ಶೋದೆಕಂದ ನೀ ಬಾರೋ || ಪ||
ಶಂಖಚಕ್ರವು ಕೈಯಲಿ ಹೊಳೆಯುತ |
ಬಿಂಕದ ಗೋವಳ ನೀ ಬಾರೋ ||
ಅಕಳಂಕಮಹಿಮನೆ ಆದಿನಾರಾಯಣ |
ಬೇಕೆಂಬ ಭಕುತರಿಗೊಲಿಬಾರೋ || ೧||
ಕಣಕಾಲಂದುಗೆ ಘಲುಘಲುರೆನುತಲಿ |
ಝಣಝಣ ವೇಣುನಾದದಲಿ ||
ಚಿಣಿಕೋಲ್ ಚೆಂಡು ಬುಗುರಿಯನಾಡುತ |
ಸಣ್ಣ ಸಣ್ಣ ಗೋವಳರೊಡಗೂಡಿ || ೨ ||
ಖಗವಾಹನನೇ ಬಗೆಬಗೆ ರೂಪನೇ |
ನಗುಮೊಗದರಸೇ ನೀ ಬಾರೋ ||
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |
ಪುರಂದರವಿಟ್ಠಲ ನೀ ಬಾರೋ || ೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!