----ರಾಗ ಕಾಂಬೋಧಿ (ಸಾರಂಗ) ಝಂಪೆತಾಳ

ಇದು ನಿನಗೆ ಧರ್ಮವೆ ಇಂದಿರೇಶ ||ಪ||
ಬದಿಗ ನೀನಾಗಿದ್ದು ಭೀತಿಪಡಿಸುವುದು ||ಅ.ಪ||

ನಿನ್ನ ಗುಣಗಳ ತುತಿಸಿ ನಿನ್ನದೇ ಹಾರೈಸಿ
ನಿನ್ನವರ ಪ್ರೀತಿಯನು ಸಂಪಾದಿಸಿ
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ
ಮಾನವನ ಈ ಪರಿಯ ಬನ್ನಬಡಿಸುವದು ||೧||

ದುರುಳನಲ್ಲವೊ ನಿನ್ನ ಚರಣ ಸೇವಕರವನೊ
ಪರಿಪಾಲಿಪುದು ನಿನಗೆ ಪರಮಧರ್ಮ
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ
ಶರಣಪಾಲಕನೆಂಬ ಬಿರುದು ಸುಳ್ಳಾಗುತಿದೆ ||೨||

ಶೋಕನಾಶಕ ವಿಗತಶೋಕನೆಂಬೋ ನಾಮ
ನಾ ಕೇಳಿ ಮೊರೆಹೊಕ್ಕೆ ಲೋಕಬಂಧು
ನಿರಾಕರಿಸದೆಮ್ಮನು ಸಾಕಬೇಕನುದಿನವು
ವಾಕು ಮನ್ನಿಪುದು ಲೋಕೈಕ ರಕ್ಷಾಮಣಿ||೩||

ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು
ಪ್ರಣತಾರ್ತಿಹರ ವಿಭೀಷಣ ಪಾಲಕ
ಕ್ಷಣಕನಂತಪರಾಧ ಎಣಿಸುವಡೆ ಕಡೆವುಂಟೆ
ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ ||೪||

ನಮೋ ನಮೋ ಬ್ರಹ್ಮಣ್ಯದೇವ ದೇವರ ದೇವ
ನಮೋ ನಮೋ ಧನ್ವಂತ್ರಿ ದುರಿತ ಹಂತ್ರಿ
ನಮೋ ನಮೋ ಕಾರುಣ್ಯಶೀಲ ಸಜ್ಜನಪಾಲ
ನಮೋ ನಮೋ ಜಗನ್ನಾಥವಿಠಲ ವಿಖ್ಯಾತ ||೫||