(ಸಾವೇರಿ ರಾಗ ತ್ರಿವಿಡೆ ತಾಳ)

ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ
ಕಷ್ಟ ಬಂದೊದಗಿ ದುಃಖಿಪ ಸಮಯಕಲ್ಲದೆ||ಪ||

ಸತಿಯು ಸುತ ಗೃಹಾದಿಗಳೆಂಬಿರುವ ಸಾಧನದಿ
ಮತಿಗೆಟ್ಟು ಮೋಹವನು ಬೆರೆಸಿಕೊಳುತ
ಗತಿಯ ಕಾಣದೆ ಕಡೆಗೆ ಅತಿದುಃಖವೆಂಬ ಸಂ-
ತತಿಯೊಳಡಗಲು ಮತ್ತೆ ಮತಿ ಬರುವುದಲ್ಲದೆ ||೧||

ಸಾಧು ಸಜ್ಜನರುಗಳು ದಯದೊಳಗೆ ಅರಹುತ್ತಿಹ
ಬೋಧೆಗಳಿಗನುಸರಿಸದಂತೆ ನಡೆದು
ಹಾದಿ ತಪ್ಪಿ ಕುಣಿಯಲಿ ಬಿದ್ದ ಇಭ*ದಂತೆ
ಆದಿತ್ಯ ಸುತ ಬಾಧಿಸುವ ಸಮಯಕಲ್ಲದೆ ||೨||

ಬರಿದೆ ಮಾಯ ಭ್ರಮೆಯೊಳು ಮೆರೆದು ನಿನ್ನಲಿ ನೀನು
ಕರಗದೆಯೆ ಅರಿತಿರುವ ಪರಿಯ ಕೇಳು
ಪರಕೆ ಪರತರನಾದ ವರದ ಸಿರಿ ನಿತ್ಯಾತ್ಮ
ಚರಣ ಸ್ಮರಿಸುತ್ತಿರು ನರಕಕೊಳಗಾಗದೆ ||೩||

( *ಇಭ=ಆನೆ)