(ರಾಗ ಶಂಕರಾಭರಣ ಅಟತಾಳ)
ಗುಮ್ಮನ ಕರೆಯದಿರೆ , ಅಮ್ಮ ನೀನು
ಗುಮ್ಮನ ಕರೆಯದಿರೆ ||ಪ||
ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನು
ಮಮ್ಮು ಉಣುತೇನೆ , ಅಮ್ಮ ಅಳುವುದಿಲ್ಲ || ಅ ||
ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ
ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೆನು , ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು , ಮಣ್ಣು ತಿನ್ನುವುದಿಲ್ಲ ||
ಬಾವಿಗೆ ಹೋಗೆ ಕಾಣೆ , ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ , ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಗೆ ಕೂಡುವೆ ||
ಮಗನ ಮಾತನು ಕೇಳುತ , ಗೋಪೀದೇವಿ
ಮುಗುಳುನಗೆಯ ನಗುತ
ಜಗದೊಡೆಯ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಾಗ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!