( ಕೇದಾರಗೌಳ ರಾಗ ಅಷ್ಟತಾಳ)

ಅನುಮಾನವೇತಕೆ ಅನುಗುಣವಾಗಿಯೆ
ಪ್ರಣವರೂಪನ ಹೋಗಿ ನೋಡಿ ಬರುವುದಕೆ ||ಪ||

ಹೋಗುವ ಎಂದೆಂಬ ಮಾತು ನಿಶ್ಚಯವಾಗಿ
ಬೇಗದ ಪಯಣದಲಿ
ನಾಗಗಿರೀಶನ ಕಂಡು ಕಾಣಿಕೆಯಿತ್ತು
ಸಾಗಿ ಬರುವ ಊರಿಗೆ ಇವರಿಗೆ ||ಅ||

ಕೋನೇರಿವಾಸನ ನಾ ಹೋಗಿ ನೋಡಲು
ಮಾನವ ಜನುಮದಲಿ
ಹೀನ ವೃತ್ತಿಯ ಬಿಟ್ಟು ಜ್ಞಾನಬುತ್ತಿಯ ಕಟ್ಟಿ
ಕಾಣಲು ಇಹಪರವಾತ ತಾನೆರೆವ ||೨||

ರಾಮನ ಶಿಕ್ಷೆಯು ರಾಮನ ರಕ್ಷೆಯು
ರಾಮನ ನಿಜಮತವು
ರಾಮ ಆಂಜನೇಯನ ಗಿರಿಯೊಳು ನಿಂತಿಪ್ಪ
ಭೂಮಿ ವರಾಹ ತಿಮ್ಮಪ್ಪ ||೩||

-- ರಚನೆ :-ನೆಕ್ಕರ ಕೃಷ್ಣದಾಸರು