(ಮಧ್ಯಮಾವತಿ ರಾಗ ಝಂಪೆತಾಳ)

ವೇಂಕಟಾಚಲನಿವಾಸ ಸಲಹಯ್ಯ
ಪಂಕಜಾಕ್ಷನೆ ಶ್ರೀನಿವಾಸ ||ಪ||

ವಾರಿಯೊಳು ಮುಳುಗಾಡಿದೆ, ಮಂದರದ
ಮೇರು ಬೆನ್ನೊಳು ತಾಳಿದೆ
ಕಾರಡವಿಯೊಳು ಚರಿಸಿದೆ, ಕಂಬದೊಳು
ಘೋರ ರೂಪವ ತೋರಿದೆ||೧||

ವಟುವಾಗಿ ಧರೆಯನಳೆದೆ, ಕೊಡಲಿಯೊಳು
ಪಟುತರದ ನೃಪರ ಗೆಲಿದೆ
ಅಟವಿವಾಸವ ಮಾಡಿದೆ, ರಣದೊಳಗೆ
ಚಟುಳ ವಾಜಿಯ ನಡೆಸಿದೆ ||೨||

ಅಂಗದಂಬರವ ಮರೆದೆ, ಕಡೆಯೊಳು, ತು-
ರಂಗದೊಳು ಏರಿ ನಲಿದೆ
ಬಂಗಾರದದ್ರಿಯೊಳು ಮೆರೆದೆ , ವರಾಹ
ರಂಗತಿಮ್ಮಪ್ಪ ಒಲಿದೆ ||೩||

-- ರಚನೆ :- ನೆಕ್ಕರ ಕೃಷ್ಣದಾಸರು