( ಭೈರವಿರಾಗ ತೀನ್ ತಾಳ)

ಪೂಜಿ ಮಾಡುವ ಬನ್ನಿರೊ ಗುರುಪಾದ
ಪೂಜಿ ಮಾಡುವ ಬನ್ನಿರೊ ||ಪ||

ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ
ನಿರ್ಮಳವೆಂಬ ಸುವಸ್ತ್ರದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ||೧||

ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಯಿಡುವ
ಸದ್ಭಾವ ಪರಿಮಳ ಪುಷ್ಪದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ||೨||

ಅರವೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ
ಪರಮಾನಂದ ಹರುಷ ನೋಡುತ ನಿಜ ನಲಿದಾಡುವ ಬನ್ನಿರೊ || ೩||

ಭಕ್ತವತ್ಸಲ ಮೂರ್ತಿಗೆ ಸುಖದುಃಖ ಧೂಪಾರತಿ ಮಾಡುವ
ಏಕೋಚಿತ್ತವೆಂಬ ಏಕಾರತಿಯಿಂದ ಪೂಜಿ ಮಾಡುವ ಬನ್ನಿರೊ ||೪||

ನೆನವು ನೈವೇದ್ಯದಲಿ ಮನಬುದ್ಧಿ ತಾಂಬೂಲವ ನೀಡುವ
ಪ್ರಾಣ ಮಹಿಪತಿಯ ಪಂಚಾರತಿಯಿಂದ ಪೂಜಿ ಮಾಡುವ ಬನ್ನಿರೊ ||೫||