(ರಾಗ ಕಾಪಿ ಅಟತಾಳ)
ಅನುಗಾಲವು ಚಿಂತೆ ಜೀವಕ್ಕೆ | ತನ್ನ
ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ||
ಸತಿಯಿದ್ದರು ಚಿಂತೆ , ಸತಿಯಿಲ್ಲದ ಚಿಂತೆ
ಮತಿಹೀನ ಸತಿಯಾದರು ಚಿಂತೆಯು
ಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆ
ಮಿತಿಮೇರೆಯಿಲ್ಲದ ಮೋಹದ ಚಿಂತೆಯು ||
ಮಕ್ಕಳಿಲ್ಲದ ಚಿಂತೆ , ಮಕ್ಕಳಾದರು ಚಿಂತೆ
ಒಕ್ಕಾಳು ಹೊನ್ನು ಕೊಡುವ ಚಿಂತೆಯು
ಅಕ್ಕರೆಯಿಂದಲೆ ತುರುಗಳ ಕಾಯ್ದರು
ಕಕ್ಕುಲತೆಯು ಬಿಟ್ಟು ಹೋಗದ ಚಿಂತೆ ||
ಬಡವನಾದರು ಚಿಂತೆ , ಬಲ್ಲಿದನಾದರು ಚಿಂತೆ
ಹಿಡಿಹೊನ್ನು ಕೈಯೊಳಾದರು ಚಿಂತೆಯು
ಪೊಡವಿಯೊಳಗೆ ನಮ್ಮ ಪುರಂದರವಿಠಲನ
ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!