(ಬಾಗೇಶ್ರೀ ರಾಗ ಝಪ್ ತಾಳ)

ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ||ಪ||

ಕ್ಲೇಶಪಾಶವ ಕತ್ತರಿಸಿ ದೋಷನಾಶವನು ಗೈಸಿ
ಮೋಕ್ಷಿಸುವ ಕೇಶವ ನಿಮ್ಮ ನಾಮ ||೧||

ನರಕ ಘೋರದ ಘಟವೆಂಬ ನರಜನ್ಮದುರ್ಘಟ
ತಾರಿಸುವ ನಾರಾಯಣ ನಿಮ್ಮ ನಾಮ ||೨||

ಮದ ಮತ್ಸರವ ಜರಿಸಿ ಭೇದಾಭೇದವ ಹರಿಸಿ
ಸದ್ಗೈಸುತಿಹ ಮಾಧವ ನಿಮ್ಮ ನಾಮ ||೩||

ಗೋವಿಸಿಹ ವಿದ್ಯದ ಮಾಯಾ ಮೋಹವನಳಿಸಿ
ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ ||೪||

ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ
ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ ||೫||

ಮೊದಲು ಮೂವಿಧಿಗಳ ಜರಿಸಿ ಸದಮಲ ಪುಣ್ಯ-
ಪದವೀವ ಮಧುಸೂಧನ ನಿಮ್ಮ ನಾಮ ||೬||

ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ
ಭಾವಭಕ್ತಿ ಈವ ತ್ರಿವಿಕ್ರಮ ನಿಮ್ಮ ನಾಮ ||೭||

ಮರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ
ಜನ್ಮ ತಾರಿಸುವ ವಾಮನ ನಿಮ್ಮ ನಾಮ ||೮||

ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ
ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ ||೯||

ಹರಿಸಿ ಸಂದೇಹ ಸಂಕಲ್ಪ ಬಾಧೆಗಳ
ಹರುಷ ಗತಿವೀವ ಹೃಷಿಕೇಶ ನಿಮ್ಮ ನಾಮ ||೧೦||

ಪರಬ್ರಹ್ಮದೊಳು ಬೆರೆಸಿ ಪರಮಪಾತಕ ಹರಿಸಿ
ಪರಮಗತಿಯೀವ ಪದ್ಮನಾಭ ನಿಮ್ಮ ನಾಮ ||೧೧||

ದಾರಿದ್ರ್ಯದುರಿತ ವಿಧ್ವಂಸನೆಯ ಮಾಡಿ ಧರೆಯೊಳು-
ದ್ಧರಿಸುವ ದಾಮೋದರ ನಿಮ್ಮ ನಾಮ ||೧೨||

ಸಕಲ ಪದವಿತ್ತ ಸುಖಸಾಧನವ ತೋರುತಿಹ
ಅಖಿಳದೊಳು ಸಂಕರುಷಣ ನಿಮ್ಮ ನಾಮ ||೧೩||

ವಾಸನೆಯ ಪೂರಿಸುತ ಭಾಷೆ ಪಾಲಿಸುತಿಹ
ಲೇಸಾಗೆ ಶ್ರೀವಾಸುದೇವ ನಿಮ್ಮ ನಾಮ ||೧೪||

ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ
ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ ||೧೫||

ಅವಮಾನ ಪರಿಹರಿಸಿ ಅನುಭವಾಮೃತ ಸುರಿಸಿ
ಅನುಕೂಲಾಗುವ ಅನಿರುದ್ಧ ನಿಮ್ಮ ನಾಮ ||೧೬||

ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ
ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ ||೧೭||

ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ
ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ ||೧೮||

ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ
ಅರುವು ಕುರುವ್ಹಿದ ನರಸಿಂಹ ನಿಮ್ಮ ನಾಮ ||೧೯||

ಅರ್ಚನೆಯ ಪ್ರಾರ್ಥನೆಯು ಪರಮಪೂಜೆಯನರಸಿ
ಅಚಲಪದವೀವ ಅಚ್ಯುತ ನಿಮ್ಮ ನಾಮ ||೨೦||

ಜನನ ಮರಣವನಳಿಸಿ ತನುಮನದೊಳು ಬೆರಿಸಿ
ಜನುಮ ಹರಿಸುವ ಜನಾರ್ಧನ ನಿಮ್ಮ ನಾಮ ||೨೧||

ಉಪಮೆಯ ರಹಿತ ವಸ್ತುವುಪಾಯದಲಿ ತೋರಿ
ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ ||೨೨||

ಹರಿಸಿ ಅಹಂಭಾವ ಆರಿಸಿ ಅನುಭವ ಪೂರ್ಣ
ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ ||೨೩||

ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ
ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ ||||೨೪||

ವೇದವಿಂಶತಿ ಸಾರ ಸಂಧ್ಯಾಯನದಿ
ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ || ೨೫||