-----ರಾಗ - ಕಲ್ಯಾಣಿ-(ಕಾಫಿ) ತೀನ್ ತಾಳ

ನೀನೇ ದಯಾನಿಧಿಯು ಶ್ರೀಗುರುರಾಯ
ನೀನೇ ದಯಾನಿಧಿಯು || ಧ್ರುವ ||

ಕರುಣದಿ ಕುಂತಿಯ ಪುತ್ರರಿಗೆ ಒಲಿದು
ಕಾಳಗ ನಿರ್ಮಿಸಿ ಕೌರವರಳಿದು
ಉಳಿಯದೆ ಇಳೆಯೊಳು ವಂಶವ ಸವರಿದ
ಶೇಷಶಯನ ಶ್ರೀ ಕೇಶವ ನೀನೆ ||೧||

ನರಗೊಲಿದು ನರಕಾಸುರನ ಮರ್ದಿಸಿ
ನಾರಗನೆಂದಜಮಿಳನ ನೀ ತಾರಿಸಿ
ನಾರದಗೊಲಿದು ನಾಟ್ಯವನಾಡಿದ
ನರಹರಿಯು ನಾರಾಯಣ ನೀನೆ ||೨||

ವೇದವ ಕದ್ದೊಯಿದಸುರನ ಸೀಳಿ
ಮಚ್ಛವತಾರದ ರೂಪವ ತಾಳಿ
ಮಾವನ ಕೊಂದ ಮಾನ್ಯರ ಮಡುಹಿದ
ಮೈದುನಗೊಲಿದ ಶ್ರೀ ಮಾಧವ ನೀನೆ ||೩||

ಗೋಕುಲದಲಿ ಪುಟ್ಟಿ ಧರೆಯೊಳು
ಬೆರಳಲಿ ಗೋವರ್ಧನ ಗಿರಿಯನೆತ್ತಿ
ಗೋಕುಲ ಕಾಯ್ದ ಗೋಪಿಯರಿಗೊಲಿದ
ಗೋಪಾಲಕೃಷ್ಣ ಗೋವಿಂದನು ನೀನೆ ||೪||

ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ-
ಕಷ್ಟವ ಪರಿಹರಿಸಿದ
ಶಿಷ್ಟ ವಿಭೀಷಣಗೊಲಿದು
ಪಟ್ಟವಗಟ್ಟಿದ ವಿಷ್ಣುವು ನೀನೆ ||೫||

ಮದನನೊಲಿದು ಕಾಳಿಂಗನ ತುಳಿದು
ಕದನದಲಿ ಬಾಣಾಸುರನಳಿದು
ಮೇದಿನಿಯೊಳು ಮರೆ ಇಲ್ಲದೆ ದೈತ್ಯರ
ಮರ್ದಿಸಿದ ಮಧುಸೂಧನನು ನೀನೆ ||೬||

ತ್ರಿಪುರವನಳಿದು ತ್ರಿಗುಣವ ತಾಳಿದ
ತೆತ್ತೀಸಕೋಟಿ ದೇವರುಗಳಾಳಿದ
ಅಕ್ರೂರಗೊಲಿದು ಚರಿತ್ರವದೋರಿದ
ತ್ರಿಜಗಪತಿ ತ್ರಿವಿಕ್ರಮ ನೀನೆ ||೭||

ವಾಲಿಯನಳಿದು ವಾಲ್ಮೀಕಿಗೊಲಿದು
ಬಲಿಚಕ್ರನ ಮುನಿಮುಂದಲಿ ಸುಳಿದು
ಬ್ರಾಹ್ಮಣನಾಗಿ ದಾನವ ಬೇಡಿದ
ಮಾನವಗೊಲಿದ ಶ್ರೀವಾಮನ ನೀನೆ ||೮||

ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ-
ಸ್ಥಳದಲಿ ಶ್ರೀಮಹಾಲಕ್ಷ್ಮಿಯ ಧರಿಸಿದ
ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ
ಶ್ರೀದೇವಿಗೊಲಿದಿಹ ಶ್ರೀಧರ ನೀನೆ ||೯||

ದಸರ ಕ್ಲೇಶಕಿಲ್ಮಿಷಗಾ ತೊಳೆದು
ಅಂಬರೀಷ ರುಕ್ಮಾಂಗದಗೊಲಿದು
ಶುಕಶೌನಕ ಪರಾಶರ ಮುನಿಗಳಿಗೆ
ಹರುಷವನಿತ್ತ ಹೃಷಿಕೇಶನು ನೀನೆ ||೧೦||

ಕ್ಷಿತಿಯೊಳು ದೃಢಪತಿವ್ರತೆಗೊಲಿದು
ಯತಿಮುನಿಗಳಿಗಿನ್ನು ಗತಿಗಳನಿತ್ತು
ಪತಿತರ ತಾರಿಸಿ ಪಾವನಗೈಸಿದ
ಪರಂಜ್ಯೋತಿ ಪದ್ಮನಾಭನು ನೀನೆ ||೧೧||

ದೇವಕಿಗೊಲಿದು ಸ್ಥಾಪಿಸಿ ಧರೆಯೊಳು
ದ್ವಾರಕಿಯಲಿ ನಿಜಲೀಲೆಯ ತೋರಿದ
ದಾರಿದ್ರ್ಯಭಂಜನ ದುರಿತವಿಧ್ವಂಸನ
ದೇವಕಿಪುತ್ರ ದಾಮೋದರ ನೀನೆ ||೧೨||

ಸಿದ್ಧಶರಣರಿಗೊಲಿದು ಸದ್ಗತಿ
ಸುಖಸಾಧನ ಸಹದೇವಗೆ ತೋರಿದ
ಸಂಭರಮದಿ ಸುಧಾಮಗ ಒಲಿದು
ಸಂತೋಷವನಿತ್ತ ಸಂಕರುಷಣ ನೀನೆ ||೧೩||

ವಸುಧಿಯೊಳು ಭಸ್ಮಾಸುರನ ಮರ್ದಿಸಿ
ಭಾಷೆಯನಿತ್ತು ಭಕ್ತರ ಪಾಲಿಸಿ
ಋಷಿ ವೇದವ್ಯಾಸಗೊಲಿದಾತನು
ವಸುದೇವಸುತ ವಾಸುದೇವನು ನೀನೆ ||೧೪||

ವಿದುರ ಉದ್ಧವ ಗರುಡಗೊಲಿದು
ಭೃಗುಮುನಿ ಕಪಿಲ ಯೋಗೇಂದ್ರನ ಸಲುಹಿದ
ಸ್ಥಿರಪದವಿತ್ತನೇಕ ಮಂದಿಗೆ
ಪ್ರಸನ್ನನಾದ ಪ್ರದ್ಯುಮ್ನನು ನೀನೆ ||೧೫||

ಸೀತಾ ಸುದ್ದಿಯ ತಂದವಗೊಲಿದು
ಹತ್ತುತಲೆಗಳ ಇದ್ದವನಳಿದು
ಕದ್ದು ಬೆಣ್ಣೆಯ ಮುದ್ದೆಯ ಮೆದ್ದು
ಉದ್ಧವಗೊಲಿದ ಅನಿರುದ್ಧನು ನೀನೆ ||೧೬||

ಸೋಕಿಸಿ ಪೂತನಿಯ ಪ್ರಾಣವ ಹೀರಿದ
ಭಕ್ತ ಪುಂಡಲೀಕನ ಸಲಹಿದ
ಭಕ್ತಿಗೆ ಒಲಿದು ಮುಕ್ತಿಯನಿತ್ತ
ಪರಮಪುರುಷ ಪುರುಷೋತ್ತಮನು ನೀನೆ ||೧೭||

ಅಕ್ಷಯವೆಂದು ರಕ್ಷಿಸಿ ಸಭೆಯೊಳು
ದ್ರೌಪದಿ ಕರುಣಾಕಟಾಕ್ಷದಿ ಸಲಹಿದ
ಭಕ್ತವತ್ಸಲನಾಗಿ ಗಜೇಂದ್ರಗೆ
ಮೋಕ್ಷವನಿತ್ತ ಅಧೋಕ್ಷಜ ನೀನೆ ||೧೮||

ನರನಾರಿಯು ನಟೇಶ್ವರನಾಗಿ
ನಖಮುಖದಲಿ ಹಿರಣ್ಯಕನ ಸೀಳಿ
ಭಕ್ತಪ್ರಹ್ಲಾದಗೆ ಒಲಿದು ಸ್ತಂಭದಿ
ಪ್ರಕಟಿಸಿದ ನರಸಿಂಹನು ನೀನೆ ||೧೯||

ಅನಿಲ ಸ್ನೇಹಿತ ಅಜಸುತಾಗ್ನಿಗೆ ಒಲಿದು
ಅಹಲ್ಯಾಶಾಪ ವಿಮೋಚನ ಮಾಡಿದ
ನೆಚ್ಚಿದ ಧ್ರುವನ ನಿಜಭಕ್ತಿಗೆ ಒಲಿದು
ಅಚಲ ಪದವಿತ್ತಚ್ಯುತ ನೀನೆ ||೨೦||

ಜತದೊಳು ಭಕ್ತಜನರಿಗೆ ಒಲಿದು
ಜಾಹ್ನವಿ ನಿರ್ಮಿಸಿ ಜನಕನ ಸಲಹಿದ
ಸಾಧು ಸಜ್ಜನ ಮುನಿ ಸಂಜೀವನ
ಜಾನಕೀಪತಿ ಜನಾರ್ಧನನು ನೀನೆ ||೨೧||

ಅಂಗದಗೊಲಿದಾನಂದವನಿತ್ತು
ಕುಂದದೆ ಕರೆದುಪಮನ್ಯನ ಸಲಹಿದ
ದಿನಕರ ಚಂದ್ರ ಕಳಿಯಗಳಿತ್ತು
ಇಂದ್ರಗೆ ಒಲಿದ ಉಪೇಂದ್ರನು ನೀನೆ ||೨೨||

ಹಯವದನನವತಾರವ ಧರಿಸಿ
ಧರೆಯೊಳು ಭಕ್ತನ ಜನ್ಮವ ಹರಿಸಿ
ಹರಿಶ್ಚಂದ್ರನ ಕ್ಲೇಶವ ಪರಿಹರಿಸಿದ
ಸುರಮುನಿಗೊಲಿದ ಶ್ರೀಹರಿಯು ನೀನೆ ||೨೩||

ಕಾಲಿ ಮಥನವ ಮಾಡಿ ಕರುಣದಿ
ಸುರರಿಗೆ ಅಮೃತವನಿತ್ತು ಸಲಹಿದ
ಕಲ್ಕ್ಯಾವತಾರದ ಲೀಲೆಯ ತೋರಿದ
ಕಪಟನಾಟಕ ಶ್ರೀಕೃಷ್ಣನು ನೀನೆ ||೨೪||

ಸಂಧ್ಯಾನದ ಸಾರಾಯವನಿತ್ತು
ಕಾಯದಿ ಸದ್ಗತಿ ಸಾಧನದೋರಿದ
ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯು
ಪರಮ ದಯಾನಿಧಿಯು ನೀನೆ ||೨೫||