(ಮಾಂಡ್ ರಾಗ ಕೇರವಾ ತಾಳ)

ಕೋಲು ಕೋಲೆನ್ನ ಕೋಲೆ
ಕೋಲು ಕೋಲೆನ್ನ ಕೋಲೆ
ಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ||

ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದು
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧||

ಧರ್ಮ ನಡೆಯಲಾಗಿ ಮರ್ಮವ ತಾಳಿದ
ಕರ್ಮಹರ ಶ್ರೀಮೂರ್ತಿಯ ಕೋಲೆ
ಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತ
ಕೂರ್ಮಾವತಾನ ಬಲಗೊಂಬೆ ಕೋಲೆ ||೨||

ಧರೆಯ ಕದ್ದಸುರನಾ ಕೋರೆದಾಡಿಂದ ಸೀಳಿ
ಹೋರಿಹೊಯಿದಾಡಿದ ನರಹರಿ ಕೋಲೆ
ಹೋರಿಹೊಯಿದಾಡಿದ ನರಹರಿ ಧರೆಯಾ ಗೆದ್ದ
ವರಹಾವತಾರನ ಬಲಗೊಂಬೆ ಕೋಲೆ ||೩||

ತರಳ ಪ್ರಹ್ಲಾದಗಾಗಿ ದುರುಳದೈತ್ಯನ ಕೊಂದು
ಕರುಳ್ ವನಮಾಲೆಯ ಧರಿಸಿದ ಕೋಲೆ
ಕರುಳ್ ವನಮಾಲೆಯ ಧರಿಸಿದಾ ಹರಿ
ನರಸಿಂಹಾವತಾರನ ಬಲಗೊಂಬೆ ಕೋಲೆ ||೪||

ನೇಮಿಸಿ ಮೂರುಪಾದ ಭೂಮಿಯ ಬೇಡಿದ
ಹೆಮ್ಮಿಯ ಪರಿಹರಿಸಿದ ಕೋಲೆ
ಹೆಮ್ಮಿಯ ಪರಿಹರಿಸಿದ ಬ್ರಾಹ್ಮಣನಾಗಿ
ವಾಮನಾವತಾರನ ಬಲಗೊಂಬೆ ಕೋಲೆ ||೫||

ಆಜ್ಞೆಯ ಮೀರಿದೆ ಅಗ್ರಜಳಾ ಶಿರ
ಶೀಘ್ರದಿಂದಲಿ ಇಳುಹಿದ ಕೋಲೆ
ಶೀಘ್ರದಿಂದಲಿ ಇಳುಹಿದಾ‌ಶಿರವನು
ಭಾರ್ಗವರಾಮನ ಬಲಗೊಂಬೆ ಕೋಲೆ ||೬||

ಕಾಮದಿಂದೊಯ್ದ ಸೀತೆ ತಾಮಸದವನ ಕೊಂದು
ನೇಮಸ್ಥಾಪಿಸಿದ ಇಳೆಯೊಳು ಕೋಲೆ
ನೇಮಸ್ಥಾಪಿಸಿದ ಇಳೆಯೊಳು ಶ್ಯಾಮವರ್ಣ
ರಾಮಾವತಾರನ ಬಲಗೊಂಬೆ ಕೋಲೆ ||೭||

ದುಷ್ಟ ದೈತ್ಯರನೆಲ್ಲ ಕುಟ್ಟಿ ಮಡುಹಿದ
ನೆಟ್ಟನೆ ಗಿರಿಯನೆತ್ತಿದ ಕೋಲೆ
ನೆಟ್ಟನೆ ಗಿರಿಯನೆತ್ತಿದ ಬೊಟ್ಟಿಲೆ
ಕೃಷ್ಣಾವತಾರನ ಬಲಗೊಂಬೆ ಕೋಲೆ ||೮||

ಕದ್ದು ತ್ರಿಪುರ ಹೋಗಿ ಇದ್ದ ಸತಿಯರ ವ್ರತ
ಸಿದ್ಧಿಯ ತಾನು ಅಳಿದನು ಕೋಲೆ
ಸಿದ್ಧಿಯ ತಾನು ಅಳಿದನು ಬುದ್ಧಿಯಲಿ
ಬೌದ್ಧಾವತಾರನ ಬಲಗೊಂಬೆ ಕೋಲೆ ||೯||

ಮಲ್ಲ ಮಾನ್ಯರನೆಲ್ಲ ಹಲ್ಲು ಮುರಿಯಲಾಗಿ
ನಲ್ಲ ತೇಜಿಯನೇರಿದ ಕೋಲೆ
ನಲ್ಲ ತೇಜಿಯನೇರಿದ ಬಲ್ಹ್ಯಾನಾಗಿ
ಕಲ್ಕ್ಯಾವತಾರನ ಬಲಗೊಂಬೆ ಕೋಲೆ ||೧೦||

ವಸ್ತು ಪರಾತ್ಪರ ವಿಸ್ತಾರದೋರಲಾಗಿ
ಹತ್ತಾವತಾರ ಧರಿಸಿದ ಕೋಲೆ
ಹತ್ತಾವತಾರ ಧರಿಸಿದ ಮಹಿಪತಿ
ಅಂತರಾತ್ಮನ ಬಲಗೊಂಬೆ ಕೋಲೆ ||೧೧||