( ಮಧ್ಯಮಾವತಿ ರಾಗ ಏಕತಾಳ)

ಇಕ್ಕೋ ನೋಡೆ ರಂಗನಾಥನ ಚಿಕ್ಕಪಾದವ ||ಪ||
ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯಪಾದವ ||ಅ.ಪ||

ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವ
ಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವ
ಪಂಕಜಾಸನನ ಹೃದಯದಲ್ಲಿ ನಲಿಯುವ ಪಾದವ
ಸಂಕಟಹರಣ ವೆಂಕಟೇಶನ ದಿವ್ಯ ಪಾದವ ||೧||

ಲಲನೆ ಲಕ್ಷ್ಮಿಯಂಕದಲ್ಲಿ ನಲಿಯುವ ಪಾದವ
ಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವ
ಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವ
ಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ ||೨||

ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವ
ಬಂಡಿಲಿದ್ದ ಶಕಟಾಸುರನ ಒದ್ದ ಪಾದವ
ಅಂಡಜ ಹನುಮರ ಭುಜದೊಳೊಪ್ಪುವ ಪಾದವ
ಕಂಡೆವೆ ಶ್ರೀರಂಗವಿಠಲನ ದಿವ್ಯಪಾದವ ||೩||