(ರಾಗಶ್ರೀ ಅಟ್ಟತಾಳ)

ಕಂಜನೇತ್ರೆ ಶುಭ ಮಂಜುಳಗಾತ್ರೆ
ಕುಂಜರದಂತೆ ಗಮನೆ ರಂಜಿತಾಗಿ ನಿರಂಜನಾಂಗಿ ||ಪ||

ಧರೆಯ ಮ್ಯಾಲೆ ಹಿರಿಯಳು ನಾ -
ನಿರಲು ಲಜ್ಜೆ ತೊರೆದು ನೀನು
ಸರಸವಾಡೋರೆ ಮುರಹರನ
ಕರೆದು ಭಾಮಿನಿ ಸುಗುಣೆ ಕಾಮಿನಿ ||೧|||

ಪತಿಯ ಪ್ರೀತಿ ನನ್ನ ಮ್ಯಾಲೆ
ಅತಿಶಯ ಇರಲು ಜ್ಯೇಷ್ಠ
ಸತಿಯಳೇನೇ ನೀನು ನೋಡು
ಮತಿಯ ರುಗ್ಮಿಣಿ ಸುಪದ್ಮಗಂಧಿನಿ ||೨||

ಒಂದು ಕಾಲದಲ್ಲಿ ದಾಸಿ-
ಯಿಂದ ಪತಿಯು ಸರಸವಾಡಲು
ಬಂದಳೇನೇ ಅರಸಿ ಸಮ-
ಳೆಂದು ಭಾಮಿನಿ ಸುಗುಣೆ ಕಾಮಿನಿ ||೩||

ದಾಸಿ ಸಮಳು ನಾನು ಅಲ್ಲ
ದೋಷ ಮಾತನಾಡಬೇಡ
ಶ್ರೀಶನ ದಯರಾಶಿ ಇರಲು
ದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ ||೪||

ಸಾರೆ ಕೃತ್ಯ ವಾರೆ ಮಾಡಿ
ದ್ವಾರಾವತಿಯಿಂದ ಎನ್ನ
ಸಾರೆ ಬಂದ ಪ್ರೀತಿಯು [ಅ-
ಪಾರೆ] ಭಾಮಿನಿ ಸುಗುಣೆ ಕಾಮಿನಿ ||೫||

ಕಡಲಶಾಯಿ ತಡೆದರಿನ್ನು
ದಿಡುಗು ದೇಹ ಬಿಡುವೆನೆಂಬೊ
ನುಡಿಯ ಕೇಳಿ ಪಿಡಿದನೆ
ಬಿಡದೆ ರುಗ್ಮಿಣಿ ಸುಪದ್ಮಗಂಧಿನಿ ||೬||

ಮಂದರಧರನು ಪ್ರೀತಿ-
ಯಿಂದ ನಿನ್ನ ಪಡೆದನೇನೆ
ಒಂದು ಮಣಿಯ ಕಾರಣದಿ
ಬಂದೆ ಭಾಮಿನಿ ಸುಗುಣೆ ಕಾಮಿನಿ ||೭||

ಸುಮ್ಮನೆ ಬಂದವಳಿಗೆ
ಬ್ರಹ್ಮ ಲಗ್ನದಿ ಬಂದೆನಗೆ
ಸಾಮ್ಯವೇನೆ ಯಾಕೆ ನಿನಗೆ
ಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ ||೮||

ಮಾನಾದಿ ಭಕ್ತಿಯು ಕನ್ಯಾ-
ದಾನವು ಲೋಕದೊಳಗುಂಟು
ಏನು ನಿನ್ನ ತಾತ ಕೊಟ್ಟ
ದೀನ ಭಾಮಿನಿ ಸುಗುಣೆ ಕಾಮಿನಿ ||೯||

ಎನ್ನ ಹಂಗದೆಂದು ಪ್ರ-
ಸನ್ನ ಕೇಳಿ ಶತಧನ್ವನ
ಬೆನ್ನಟ್ಟಿ ಕೊಂದನೆ ನೀ-
ಚನ್ನ ರುಗ್ಮಿಣಿ ಸುಪದ್ಮಗಂಧಿನಿ ||೧೦||

ವೀರ ಅರಸರ ಸ್ವಭಾವ
ಚೋರರ ಕೊಲ್ಲಬೇಕೆಂಬೋ
ಸಾರ ಪ್ರೀತಿಯದರಿಂದ
ತೋರೆ ಭಾಮಿನಿ ಸುಗುಣೆ ಕಾಮಿನಿ ||೧೧||

ಇಂದ್ರಾದಿ ದೇವತೆಗಳೊಳು
ಸಾಂದ್ರಯುದ್ಧವನ್ನೆ ಮಾಡಿ
ವೀಂದ್ರ [ಗ] ಎನಗೆ ಪಾರಿಜಾತ
ತಂದ ರುಗ್ಮಿಣಿ ಸುಪದ್ಮಗಂಧಿನಿ ||೧೨||

ವರದರಂಗ ಕರದೊಳೆನ್ನ
ಸುರಪುಷ್ಪವಿರಲು ನಿನ್ನ
[ತ್ವರೆ] ಕ್ಲೇಶ ನೋಡಿ ತಂದ
ತರುವ ಭಾಮಿನಿ ಸುಗುಣೆ ಕಾಮಿನಿ ||೧೩||

ನಿಜಳೆಂದು ರಂಗನು ಎನ್ನ
ವಿಜಯಯಾತ್ರೆಯಲ್ಲಿ ತನ್ನ
ಭುಜಗಳಿಂದಾಲಿಂಗಿಸಿದ
ಸುಜನೆ ರುಗ್ಮಿಣಿ ಸುಪದ್ಮಗಂಧಿನಿ ||೧೪||

ಅರಸರ ಸ್ವಭಾವ ತಮ್ಮ
ಅರಸೇರ ಮನೆಯೊಳಗಿಟ್ಟು
ಸರಸ ದಾಸೇರಿಂದ್ಹೋಗೋದು
ಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ ||೧೫||

ಸಾರವಚನ ಕೇಳಿ ಭಾಮೆ
ಮೋರೆ ಕೆಳಗೆ ಮಾಡುತಿರಲು
ನಾರಿ ರುಗ್ಮಿಣಿ ಭಾಮೆಯರನ್ನು
ವೀರ ಕರೆದನು ತಾ ಸೇರಿ ಮೆರೆದನು ||೧೬||

ಮಂಗಳಾಂಗ ಮಹಿಮ ಕೇಶವಾ-
ಲಿಂಗಿಸಿದ ಭೈಷ್ಮಿಯನ್ನು
ತುಂಗ ಗುಣ ಗೋಪೀರಮಣ
ರಂಗವಿಠಲನು ಅನಂಗಜನಕನು ||೧೭||