(ನಾಟಿ ರಾಗ ಛಾಪುತಾಳ)
ರಂಗನಾಥನ ನೋಡುವ ಬನ್ನಿ ಶ್ರೀ- ||ಪ||
ರಂಗನ ದಿವ್ಯ ವಿಮಾನದಲ್ಲಿಹನ ||ಅ.ಪ||
ಕಮನೀಯಗಾತ್ರನ ಕರುಣಾಂತರಂಗನ
ಕಾಮಿತಾರ್ಥವೀವ ಕಲ್ಪವೃಕ್ಷನ
ಕಮಲದಳ ನೇತ್ರನ ಕಸ್ತೂರಿರಂಗನ
ಕಾಮಧೇನು ಕಾವೇರಿರಂಗನ ||೧||
ವಾಸುಕಿಶಯನನ ವಾರಿಧಿನಿಲಯನ
ವಾಸುದೇವ ವಾರಿಜನಾಭನ
ವಾಸವಾದಿ ಭಕ್ತ ಹೃದಯಾಂಬುಜದಲ್ಲಿ
ವಾಸವಾಗಿರುತಿಹ ವಸುದೇವಸುತನ ||೨||
ಮಂಗಳಗಾತ್ರನ ಮಂಜುಳಭಾಷನ
ಗಂಗಾಜನ ಅಜಜನಕನ
ಸಂಗೀತಲೋಲನ ಸಾಧುಸಮ್ಮತನ
ರಂಗವಿಠಲ ರಾಜೀವನೇತ್ರನ ||೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!