(ಪೂರ್ವಿ ರಾಗ ಖಂಡ ಛಾಪು ತಾಳ)

ಶ್ರೀ ರಾಮ ನಿನ್ನ ಪಾದವ ತೋರೋ
ಮೋಹನ್ನ ಗುಣಧಾಮ ನಿನ್ನ ಮೋಹದ ಪಾದವ ||ಪ||

ವರಗುಣಜಾಲ ಸುರಗುಣಲೋಲ
ಕರುಣಾಲವಾಲ ತರುಣೀ ಪರಿಪಾಲ ||೧||

ಅಜಭವಪೂಜಿತ ಗಜವರಭಾವಿತ
ಸುಜನರ ಸೇವಿತ ತ್ರಿಜಗವಂದಿತ ||೨||

ಅಂಗಜ ಜನಕ ವಿಹಂಗತುರಂಗ
ತುಂಗವಿಕ್ರಮ ಶ್ರೀರಂಗವಿಠಲ ||೩||