(ರಾಗ ನಾದನಾಮಕ್ರಿಯೆ ಅಟತಾಳ)

ದಾಸನ ಮಾಡಿಕೋ ಎನ್ನ , ಸ್ವಾಮಿ
ಸಾಸಿರನಾಮದ ವೆಂಕಟರಮಣ ||

ದುರ್ಬುದ್ಧಿಗಳನೆಲ್ಲ ಬಿಡಿಸೋ , ನಿನ್ನ
ಕರುಣಕವಚವೆನ್ನ ಹರಣಕ್ಕೆ ತೊಡಿಸೋ
ಚರಣಸೇವೆ ಎನಗೆ ಕೊಡಿಸೋ , ಅಭಯ -
ಕರಪುಷ್ಪವನೆನ್ನ ಶಿರದಲ್ಲಿ ಮುಡಿಸೋ ||

ದೃಢಭಕ್ತಿ ನಿನ್ನಲ್ಲಿ ಬೇಡಿ , ನಾ-
ನಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಿಲೇಕೆನ್ನ ನೋಡಿ , ಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ ||

ಮೊರೆಹೊಕ್ಕವರ ಕಾವ ಬಿರುದು, ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳನೆಲ್ಲವ ತರಿದು , ಸಿರಿ
ಪುರಂದರವಿಟ್ಠಲ ಎನ್ನನು ಪೊರೆದು ||