ಎನ್ನ ಕಂದ ಹಳ್ಳಿಯ ಹನುಮಾ
ಚೆನ್ನಾಗಿ ಇಹರೆ ಲಕ್ಷ್ಮಣ ದೇವರು ||ಪ||

ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದು
ಕರ್ಪೂರ ವೀಳ್ಯವಂದು ಕರುಕು ಇಂದು
ಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆ ಇಂದು
ಶ್ರೀಪತಿ ರಾಘವ ಕ್ಷೇಮದಲೈದಾರೆ    ||೧||

ನವವಸ್ತ್ರಗಳು ಅಂದು ನಾರಸೀರೆಗಳಿಂದು
ಹೂವಿನ ಗಂಟು ಅಂದು ಜಡೆಗಳಿಂದು
ಜವಾಜಿ ಕತ್ತುರಿಯಂದು ಭಸಿತಧೂಳಿಯಿಂದು
ಶ್ರೀವರ ರಾಘವ ಕ್ಷೇಮದಲೈದಾರೆ    ||೨||

ಕನಕರಥಗಳಂದು ಕಾಲುನಡಿಗೆಯಿಂದು
ಘನಸತ್ತಿಗೆಯಂದು ಬಿಸಿಲು ಇಂದು
ಸನಕಾದಿಗಳೋಲೈಪ ಆದಿಕೇಶವ ನಮ್ಮ
ಹನುಮೇಶ ರಾಘವ ಕ್ಷೇಮದಲೈದಾರೆ    ||೩||