ಬರೆದದ್ದು : ಕನಕದಾಸರು ರಾಗ:ಶಂಕರಾಭರಣ ತಾಳ:ಅಟ

ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ || ಪಲ್ಲವಿ ||

ಕಾಳುದಾಸರ ಮನೆಯ ಆಳು ದಾಸ ನಾನುಯ್ಯ |
ಕೀಳುದಾಸನು ನಾನು ಕಿರಿಯ ದಾಸ ||
ಭಾಳಾಕ್ಷ ಮುಂತಾಗಿ ಭಜಿಪ ದೇವರಮನೆಯ |
ಆಳಿನ ಆಳಿನ ಆಳಿನಡಿದಾಸ ನಾನು || ೧ ||

ಪಂಕಜನಾಭನ ಮನೆಯ ಮಂಕುದಾಸನಯ್ಯ |
ಕೊಂಕುದಾಸನು ನಾನು ಕುರುಡು ದಾಸ ||
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ |
ಬಿಂಕದ ಬಾಗಿಲ ಕಾಯ್ವ ಬಡದಾಸ ನಾನು || ೨ ||

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ |
ಕುಲವಿಲ್ಲದ ದಾಸ ಕುನ್ನಿದಾಸ ||
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ |
ಸೆಲೆಮುಕ್ತಿ ಪಾಲಿಸೊ ಆದಿಕೇಶವರಾಯ || ೩ ||