ಆವಳಂಜಿಸಿದವಳು ಪೇಳು ರಂಗಮ್ಮ ನಾ-
ನವಳ ಗಾರು ಮಾಡುವೆ ನಡೆ ಕೃಷ್ಣಮ್ಮ  ||ಪ||

ದೂರುವಿರಾದರೆ ಮಗನ ದಾರಿಗೆ ಹೋಗದಿರಿ ಎಂದು
ಸಾರಿ ಕೈಯ ಕಡ್ಡಿ ಕೊಟ್ಟೆ ಜಾರೆಯರಿಗೆ
ಸಾರಿ ಸಾರಿಗೆ ನಿನ್ನನು ರಟ್ಟು ಮಾಡುವ ಮಾತೇನು
ಆರಿಗೆ ಮಕ್ಕಳಿಲ್ಲೇನೊ ನಾನೇ ಹಡೆದವಳೇನೊ  ||೧||

ಇದ್ದರಿರಲಿ ಕೂಸಿನ  ಆಡುವಾಟಕೊಪ್ಪಿದರೆ
ಎದ್ದು ಹೋದರೆ ಹೋಗಲಿ ಆವಪಳ್ಳಿಂದ
ಕದ್ದು ತಿಂದನೆಂದಾವಾಗ ಕೂಗುವ ಕಾರಣವೇನೊ
ಮುದ್ದೆ ಬೆಣ್ಣೆ  ಕೈಯಲ್ಲಿತ್ತರೊಲ್ಲದೆ ಚೆಲ್ಲುವೆ ಕಂದ ||೨||

ಏಸು ಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿ
ಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆ
ಕೂಸೆ ನಿನ್ನ ಕಂಡಸೂಯೆಬಡುವರಳಿಯಲಮ್ಮ
ದಾಸರಿಗೆ ಲೇಸಾಗಲಿ ಪ್ರಸನ್ವೆಂಕಟ ಕೃಷ್ಣ ||೩||
 

----ಪ್ರಸನ್ನವೆಂಕಟದಾಸರು