( ರಾಗ ನಾದನಾಮಕ್ರಿಯ. ಆದಿ ತಾಳ)

ಮಡಿ ಮಡಿ ಮಡಿಯೆಂದು ಮಾರ್ಮಾರು ಹಾರುತಿ
ಮಡಿಯೆಲ್ಲಿ ಬಂತೆ ಬಿಕನಾಸಿ||ಪ||
ಮಡಿಯು ನೀನೆ ಮೈಲಿಗೆ ನೀನೆ
ಸುಡಲಿ ನಿನ್ನ ಮಡಿ ಬಿಕನಾಸಿ||ಅ.ಪ||

ಎಲುವು ಚರ್ಮ ಮಲಮೂತ್ರ ಗುಂಡಿಲಿ
ನಲಿವುತ ನಿಂತೆಯ ಬಿಕನಾಸಿ
ನೆಲೆ ಗೊಂಡ ನವ ದ್ವಾರದ ಹೊಲೆಯೊಳು
ನರಳುತ ನೀ ಬಿದ್ದೆ ಬಿಕನಾಸಿ ||

ಹುಟ್ಟುತ ಸೂತಕ ಸಾಯಲು ಸೂತಕ
ನಟ್ಟ ನಡುವೆಲ್ಲಿ ಬಂತೆ ಬಿಕನಾಸಿ
ಪಟ್ಟಣ ಕಾವೇರಿಲಿ ಮುಳುಗಲು ನಿನ್ನ
ಮುಟ್ಟು ಹೋದೀತೆ ಬಿಕನಾಸಿ ||

ಚರ್ಮವ ತೊಳೆದರೆ ಕರ್ಮವು ಹೋಗ್ವುದೆ
ಮರ್ಮವ ತಿಳಿಯದೆ ಬಿಕನಾಸಿ
ಬೊಮ್ಮನಯ್ಯ ಪುರಂದರ ವಿಠಲನ ಪಾಡಿ
ನಿರ್ಮಲದಿ ಬಾಳೆ ಬಿಕನಾಸಿ ||