(ರಾಗ ಮುಖಾರಿ. ಅಟ ತಾಳ)
ಮಕ್ಕಳ ಮಾಣಿಕವೆ ಮನೋಹರ ನಿಧಿಯೆ ವೈರಿ-
ರಕ್ಕಸ ಶಕಟನ ತುಳಿದುದೀ ಪಾದವೆ ||ಪ||
ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ
ಜಲಧಿಯ ಪಡೇದದ್ದೀ ಪಾದವೆ ಕೃಷ್ಣ
ಹಲವು ಕಾಲಗಳಿಂದ ಶಿಲೆ ಶಾಪ ಪಡೆದಿರಲು
ಫಲಕಾಲಕ್ಕೊದಗಿದ್ದುದೀ ಪಾದವೆ ಕೃಷ್ಣ ||
ಕಡು ಕೋಪದಿಂದ ಕಾಳಿಂಗನ ಮಡುವ ಕಲಕಿ
ಹೆಡೆಯನ್ನು ತುಳಿದದ್ದೀ ಪಾದವೆ ಕೃಷ್ಣ
ಸಡಗರದಿ ಕೌರವನ ಸಿಂಹಾಸನವನು
ಹೊಡೆಮಗುಚಿ ಕೆಡಹಿದ್ದೀ ಪಾದವೆ ಕೃಷ್ಣ ||
ಶೃಂಗಾರದಿಂದಾರು ಹೆಂಗಳ ಸಹಿತ ಶ್ರೀ-
ಅಂಗನೆಯೊತ್ತುವದೀ ಪಾದವೆ ಕೃಷ್ಣ
ಸಂಗ ಸುಖದಿ ಶ್ರೀ ಪುರಂದರವಿಠಲನೆ
ಅಂಗದೊಳಗಡಗಿದ್ದುದೀ ಪಾದವೆ ಕೃಷ್ಣ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!