(ರಾಗ ರೇಗುಪ್ತಿ. ಅಟ ತಾಳ)

ಮಾನವ ಜನ್ಮ ದೊಡ್ಡದು, ಇದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ||ಪ||

ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಹುಚ್ಚರಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಇರುವರೆ ಖೋಡಿ ||

ಕಾಲನ ದೂತರು ಕಾಲ್ ಪಿಡಿದೆಳೆವಾಗ
ತಾಳು ತಾಳೆಂದರೆ ತಾಳುವರೆ
ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೊ
ಹಾಳು ಸಂಸಾರ ಸುಳಿಗೆ ಸಿಕ್ಕಲು ಬೇಡಿ ||

ಏನು ಕಾರಣ ಯದುಪತಿಯನು ಮರೆತಿರಿ
ಧನ ಧಾನ್ಯ ಪುತ್ರರು ಕಾಯುವರೆ
ಇನ್ನಾದರು ಏಕೋಭಾವದಿ ಭಜಿಸಿರೊ
ಚೆನ್ನ ಶ್ರೀ ಪುರಂದರ ವಿಟ್ಠಲ ರಾಯನ ||