ಈಸಬೇಕು-ಇದ್ದು ಜೈಸಬೇಕು|
ಹೇಸಿಕೆ ಸಂಸಾರದಲ್ಲಿ ಲೇಶ ಆಸೆ ಇಡದ ಹಾಗೆ ||ಪ||

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ||೧||

ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ|
ಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ ||೨||

ಮಾಂಸದಾಶೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು |
ಮೋಸ ಹೋಗದೆ ಪುರಂದರವಿಠಲ ಜಗದೀಶನೆನುತ ಕೊಂಡಾಡುವರೆಲ್ಲ ||೩||