(ರಾಗ ಭೈರವಿ ಆದಿ ತಾಳ)

ಓಡಿ ಬಾರಯ್ಯ ವೈಕುಂಠಪತಿ, ನಿನ್ನ
ನೋಡುವೆ ಮನದಣಿಯೆ ||ಪ||
ಕಾಡಬೇಡವೋ ಕರುಣಾಕರ ,ನಿನ್ನ
ಬೇಡಿಕೊಂಬೆನೊ ರಂಗಯ್ಯ ಬೇಗ ||ಅ.ಪ||

ಕೆಂದಾವರೆ ಪೋಲ್ವ ಪಾದಗಳಿಂದ , ರಂಗ
ಧಿಂ ಧಿಮಿ ಧಿಮಿಕೆಂದು ಕುಣಿಯುತಲಿ
ಅಂದುಗೆ ಕಿರುಗೆಜ್ಜೆ ನಲಿದಾಡುತ ಬಾರೋ, ಅರ-
ವಿಂದ ನಯನ ಗೋವಿಂದ ನೀ ಬಾರೋ ||

ಎಣ್ಣೋರಿಗತಿರಸ ದಧಿ ಘೃತವೋ, ರಂಗ
ಎನ್ನಯ್ಯ ನಿನಗೆ ಕೊಡುವ ಬಾರೋ
ಚಿಣ್ಣರ ಒಡನಾಟ ಸಾಕೋ ಬಿಡೋ , ಈಗ
ಬೆಣ್ಣೆಯ ಮೆಲುವುದು ಬೇಡವೋ ಕಂದ ||

ತುರುಬಿನ ಮೇಲೆ ನಲಿಯುತಲಿರುತಿಹ
ಮರುಗಮಲ್ಲಿಗೆ ಜಾಜಿ ತುಲಸಿಯ ದಂಡೆ
ಕರದಲ್ಲಿ ಪಿಡಿದಿಹೆ ಮುತ್ತಿನ ಚೆಂಡು
ಸರಸದಿಂದಲಿ ನೀ ನಲಿದಾಡುತ ಬಾರೋ ||

ಕೋಟಿ ಸೂರ್ಯ ಪ್ರಕಾಶದಂತೆ ಕಿ-
ರೀಟ ಕುಂಡಲ ಬಾವುಲಿ ಹೊಳೆಯೆ ಲ-
ಲಾಟ ಕಸ್ತೂರಿ ತಿಲಕ ಇಡುವೆ , ರಂಗ
ಕೂಟ ಗೋಪಾಲರ ಆಟ ಸಾಕೋ ಈಗ ||

ಮಂಗಳಾತ್ಮಕ ಮೋಹನಕಾಯ, ರಂಗ
ಸಂಗೀತಲೋಲ ಸದ್ಗುಣ ಶೀಲ
ಅಂಗನೆಯರಿಗೆಲ್ಲ ಅತಿ ಪ್ರಿಯನಾದ, ಶುಭ
ಮಂಗಳ ಮೂರುತಿ ಪುರಂದರ ವಿಠಲ||