( ರಾಗ ಮೋಹನ ಅಟತಾಳ)

ಹಂಸ ನಿನ್ನಲ್ಲಿ ನೀ ನೋಡೋ , ಭವ
ಪಾಶಮುಕ್ತನಾಗಿ ಹರಿಯನ್ನು ಕೂಡೋ ||ಪ||

ಸಖಗಳೆರಡುಂಟು ನಿನಗೆ , ನೀ
ಹೊಕ್ಕು ಹೋಗುವೆ ಮೂರುಪಂಜರದೊಳಗೆ
ಲೆಕ್ಕವಿಲ್ಲದ ಬಿಟ್ಟಿ ನಿನಗೆ , ಈಗ
ಸಿಕ್ಕಿದೆಯೋ ಮಾಯಾಪಾಶದೊಳಗೆ ||

ಹಬ್ಬದ ಸವಿಗೆ ನೀ ಬಂದೆ , ಬಲು
ಕೊಬ್ಬಿಲಿ ಕಾಣದೆ ವಿಷಯದೊಳು ಬಿದ್ದೆ
ನಿಬ್ಬಣದಲಿ ಮೈಯ ಮುರಿದೆ , ನೀ-
ನೊಬ್ಬನೇ ಹೋಗಿ ಕಾಲಕ್ಕೆ ಗುರಿಯಾದೆ ||

ದಾರಿಗೆ ದಾರು ಮತ್ತಿಲ್ಲ , ದೃಢ
ಸೇರಿತು ಮನವನು ಮನೆಯೊಳಗೆಲ್ಲ
ದೂರ ಹೋಯಿತು ಪ್ರಾಯವೆಲ್ಲ , ಸಿರಿ-
ಪುರಂದರವಿಠಲನಲ್ಲದೆ ಬೇರೆ ಇಲ್ಲ ||