( ರಾಗ ಕಾಂಭೋಜ ಝಂಪೆತಾಳ )

ಮುತ್ತೈದಾಗಿರಬೇಕು ಮುದದಿಂದಲಿ
ಹತ್ತುನೂರು ನಾಮದೊಡೆಯ
ಹರಿನಾಮ ಪತಿಯೆಂದು ||ಪ||

ಗುರುಮಧ್ವಶಾಸ್ತ್ರವನು ಓದುವುದೇ ಮಾಂಗಲ್ಯ
ವೈರಾಗ್ಯವೆಂಬ ಒಪ್ಪುವ ಮೂಗುತಿ
ತಾರತಮ್ಯ ಜ್ಞಾನ ತಾಯಿತ್ತು ಮುತ್ತು ಸರ
ಕರುಣರಸವೆಂಬ ಕಟ್ಟಾಣಿ ಕಟ್ಟಿಕೊಂಡು ||

ಹರಿಕಥೆ ಕೇಳುವುದು ಕಿವಿಗೆ ಮುತ್ತಿನ ಓಲೆ
ನಿರತ ಸತ್ಕರ್ಮವು ನಿಜಕಾಂತಿಯು
ಹರಿದಾಸರ ಪಾದರಜ ಹೆರಳು ಭಂಗಾರ
ಗುರುಭಕುತಿ ಎಂಬಂಥ ಗಂಧಕುಂಕುಮ ಧರಿಸಿ ||

ಪೊಡವಿಯೊಳು ಪರಹಿತದ ಪಟ್ಟಾವಳಿಯುಟ್ಟು
ಕೊಡುವ ದಾನಗಳೆಂಬೋ ಕುಬಸ ತೊಟ್ಟು
ಬಿದದೆ ಎನ್ನೊಡೆಯ ಶ್ರೀಪುರಂದರವಿಠಲನ
ದೃಢಭಕ್ತಿಯೆಂಬಂಥ ಕಡಗ ಬಳೆ ಇಟ್ಟುಕೊಂಡು ||