(ರಾಗ ಕಾಂಭೋಜ ಝಂಪೆ ತಾಳ)

ತುರು ಕರು ಕರೆದರೆ ಉಣಬಹುದಣ್ಣ
ತುರು ಕರು ಕರೆದರೆ ಅತಿ ಪುಣ್ಯವಯ್ಯ ||

ತುರು ಕರಿಂದ ಮುಟ್ಟುಮುಡಿ ಬಿಟ್ಟು ಹೋಗೋದು
ತುರು ಕರಿಂದ ಎಂಜಲು ಹೋಗೋದು
ತುರು ಕರ ಕೂದಲು ತುರುಬಿಗೆ ಸುತ್ತಿದರೆ
ಎಣಿಕೆಯಿಲ್ಲದ ಮುತ್ತೈದೆಯರಣ್ಣ ||

ತುರು ಕರಿಂದ ಸ್ವರ್ಗ ಸಾಧನವಾಗೋದು
ತುರು ಕರಿಂದ ನರಕ ದೂರವಯ್ಯ
ತುರು ಕರ ಬಂದರೆ ಸರಕ್ಕನೆ ಏಳಬೇಕು
ತುರು ಕರು ಪೂಜಿಸೆ ಹರಿ ಒಲಿವ ||

ತುರು ಕರ ನೀರ ಎರಕೊಂಡ ನಮ್ಮ ದೇವ
ಎರಕೊಂಡ ನೀರೆಲ್ಲ ಸನಕಾದಿಗಳಿಗೆ
ಬೆರಕೆ ಮಾಡಿದ ಹರಿದಾಸರಿಗೆಲ್ಲ
ಎರವು ಮಾಡಿದ ನಮ್ಮ ಪುರಂದರವಿಠಲ ||