(ರಾಗ ಧನಶ್ರೀ ಅಟತಾಳ )

ಕಣ್ಣಾರೆ ಕಂಡೆನಚ್ಯುತನ , ಕಂಚಿ
ಪುಣ್ಯಕೋಟಿ ಕರಿರ್‍ಆಜವರದನ ||ಪ||

ವರ ಮಣಿಮುಕುಟಮಸ್ತಕನ , ಸರ್ವ
ಸುರಸನಕಾದಿ ವಂದಿತ ಪಾದಯುಗನ
ತರುಣಿ ಲಕ್ಷ್ಮಿಮನೋಹರನ , ಪೀತಾಂ-
ಬರದುಡುಗೆಯಲ್ಲಿ ರಂಜಿತ ವಿಗ್ರಹನ ||

ಕಸ್ತೂರಿತಿಲಕನೊಸಲನ , ತೋರ-
ಮುತ್ತಿನಹಾರ ಪದಕಭೂಷಣನ
ಎತ್ತಿದಾಭಯಹಸ್ತನ , ತನ್ನ
ಭಕ್ತರ ಸ್ತುತಿಗೆ ಹಾರೈಸಿ ಹಿಗ್ಗುವನ ||

ನೀಲಮೇಘಶ್ಯಾಮನ , ಬಾಲ
ಲೋಲ ಮಕರಕುಂಡಲ ಧರಿಸಿಹನ
ಮೂಲೋಕದೊಳಗೆ ಚೆನ್ನಿಗನ, ಉಮಾ-
ಲೋಲಜ ವಂದ್ಯ ವೈಕುಂಠವಲ್ಲಭನ ||

ಭಾನುಕೋಟಿತೇಜದವನ , ಭವ-
ಕಾನನರಾಶಿಗೆ ಹವ್ಯವಾಹನನ
ದಾನವರೆದೆಯ ತಲ್ಲಣನ, ಮುನಿ-
ಮಾನಸಹಂಸ ಎಂದೆನಿಸಿಕೊಂಬವನ ||

ತುಂಗಚತುರ್ಭುಜದವನ , ಶುಭ-
ಮಂಗಳ ರೇಖೆ ಅಂಗಾಲಲೊಪ್ಪುವನ
ಶೃಂಗಾರಹಾರ ಕಂಧರನ , ದೇವ-
ಗಂಗೆಯ ಪಿತ ಪುರಂದರವಿಠಲನ ||