(ರಾಗ ಕಲ್ಯಾಣಿ ಆದಿತಾಳ)
ಕೂಸು ಕಂಡೀರ್ಯಾ , ಜ್ಞಾನಿಗಳೆಲ್ಲ
ಕೂಸು ಕಂಡೀರ್ಯಾ || ಪ||
ಸಾಸಿರನಾಮದ ಶತಕೋಟಿತೇಜದ
ಸೂಸುವ ಸುಖಮಯ ಜ್ಞಾನದ ಕೂಸು ||ಅ||
ಜ್ಞಾನಸಮುದ್ರದೊಳಾಡುವ ಕೂಸು
ಜ್ಞಾನಿ ಹೃದಯದಿ ಹೊಳೆಯುವ ಕೂಸು
ದೀನದಾಸರಿಗೆ ಕಾಣುವ ಕೂಸು
ತಾನೆ ಬಲ್ಲುದು ತನ್ನ ಮಹಿಮೆಯ ಕೂಸು ||
ಲೋಕತ್ರಯವೆಲ್ಲ ನೋಡುವ ಕೂಸು
ಬೇಕಾದ ಭಕ್ತರೊಳಾಡುವ ಕೂಸು
ಆಕಾರವಿದ್ದು ನಿರಾಕಾರ ಕೂಸು
ಸಾಕಾರದೃಷ್ಟಿಗೆ ಸಿಲುಕದ ಕೂಸು ||
ತನುಮನಧನದೊಳು ಕುಳಿತಿಹ ಕೂಸು
ಘನವಾದ ಮಹಿಮೆಗೆ ಕಾರಣ ಕೂಸು
ಬಿನುಗು ಬುದ್ಧಿಗೆ ಎಂದೂ ಸಿಲುಕದ ಕೂಸು
ಚಿನುಮಯ ಪುರಂದರ ವಿಟ್ಠಲ ಕೂಸು ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!