(ರಾಗ ಶಂಕರಾಭರಣ ತ್ರಿಪುಟ ತಾಳ)

ಜೋಜೋ ಶ್ರೀಕೃಷ್ಣ ಪರಮಾನಂದ
ಜೋಜೋ ಗೋಪಿಯ ಕಂದ ಮುಕುಂದ ಜೋಜೋ ||ಪ||

ಪಾಲಗಡಲೊಳು ಪವಡಿಸಿದವನೇ ಒಂ-
ದಾಲದೆಲೆಯ ಮೇಲೆ ಮಲಗಿದ ಶಿಶುವೇ
ಶ್ರೀಲತಾಂಗಿಯರ ಚಿತ್ತದೊಲ್ಲಭನೇ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||

ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಥಳಿಸುವ ಗುರುಗುಂಜಿಯ ಮಾಲೆ
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ ||

ಯಾರ ಕಂದ ನೀನಾರ ನಿಧಾನೀ
ಆರ ರತ್ನವೊ ನೀನಾರ ಮಾಣಿಕವೋ
ಸೇರಿತು ಎನಗೊಂದು ಚಿಂತಾಮಣಿ ಎಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||

ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖನಿದ್ರೆ ತಂದುಕೋ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನುಓಜೋ ||

ಅಂಡಜವಾಹನ ಅನಂತಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ
ಹಿಂಡು ದೈವದ ಗಂಡ ಉದ್ದಂಡನೆ
ಪಾಂಡುರಂಗ ಶ್ರೀ ಪುರಂದರ ವಿಠಲ ||