( ರಾಗ ಶಂಕರಾಭರಣ ಅಟ ತಾಳ)

ಅಂಬಿಗ ನಾ ನಿನ್ನನಂಬಿದೆ, ಜಗ-
ದಂಬಾರಮಣ ನಂಬಿದೆ ||ಪ||

ತುಂಬಿದ ಹರಿಗೋಲಂಬಿಗ, ಅದ-
ಕೊಂಭತ್ತು ಛಿದ್ರವು ಅಂಬಿಗ
ಸಂಭ್ರಮದಿಂ ನೋಡಂಬಿಗ ಅದ-
ರಿಂಬು ನೋಡಿ ನಡೆಸಂಬಿಗ

ಹೊಳೆಯ ಭರವ ನೋಡಂಬಿಗ, ಅದಕೆ
ಸೆಳವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ, ಎನ್ನ
ಸೆಳೆದುಕೊಂಡೊಯ್ಯೊ ನೀನಂಬಿಗ

ಆರು ತೆರೆಯ ನೋಡಂಬಿಗ, ಅದು
ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ, ಅದ ನೀ-
ವಾರಿಸಿ ದಾಟಿಸೋ ಅಂಬಿಗ

ಸತ್ಯವೆಂಬುವ ಹುಟ್ಟಂಬಿಗ, ಸದಾ
ಭಕ್ತಿಯೆಂಬುದೆ ಪಥವಂಬಿಗ
ನಿತ್ಯಮೂರುತಿ ಪುರಂದರವಿಠಲ, ನಮ್ಮ
ಮುಕ್ತಿಮಂಟಪಕೊಯ್ಯೊ ಅಂಬಿಗ