( ರಾಗ ಸಾವೇರಿ. ಆಟತಾಳ)

ಧರ್ಮವೇ ಜಯವೆಂಬ ದಿವ್ಯ ಮಂತ್ರ ||ಪ||
ಮರ್ಮವನರಿತು ಮಾಡಲುಬೇಕು ತಂತ್ರ ||ಅ||

ವಿಷವಿಕ್ಕಿದವಗೆ ಷಡ್ರಸವನುಣಿಸಲುಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹರಸಲುಬೇಕು
ಮೋಸ ಮಾಡುವನ ಹೆಸರು ಮಗನಿಗಿಡಲು ಬೇಕು ||

ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು
ಬಂಧನದೊಳಿಟ್ಟವರ ಬೆರೆಯ ಬೇಕು
ಕೊಂದ ವೈರಿಯ ಮನೆಗೆ ನಡೆದು ಹೋಗಲು ಬೇಕು
ಕುಂದೆಣಿಸುವವರ ಗೆಳೆತನ ಮಾಡಬೇಕು ||

ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀ ಪುರಂದರ ವಿಟ್ಠಲನ
ಕೊಂಡಾಡಿ ತಾ ಧನ್ಯನಾಗಬೇಕು ||